ಮಂಜೇಶ್ವರ: ಬಕ್ರೀದ್ ಹಬ್ಬವನ್ನು ನಿನ್ನೆ ನಾಡಿನಾದ್ಯಂತ ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗಿನಿಂದಲೇ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪವಿತ್ರ ಈದ್ ನಮಾಜ್ ಸಲ್ಲಿಸಿದ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಲವು ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಮಂಜೇಶ್ವರ ತಾಲೂಕಿನ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪ್ರಾರ್ಥನೆ ನಡೆಯಿತು. ಪ್ರಮುಖವಾಗಿ ಉದ್ಯಾವರ, ಕುಂಜತ್ತೂರು, ಪೊಸೋಟು, ಬಂಗ್ರ ಮಂಜೇಶ್ವರ, ಉಪ್ಪಳ ಜುಮಾ ಮಸೀದಿಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅದೇ ರೀತಿ ಕುಂಜತ್ತೂರು ಮಸ್ಜಿದ್ನೂರ್, ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿ, ಚೌಕಿ ಸಿರಾಜುಲ್ ಹುದಾ ಮಸೀದಿ ಸೇರಿದಂತೆ ನಾಡಿನಾದ್ಯಂತ ಈದ್ ನಮಾಜ್ ಹಾಗೂ ಪ್ರಾರ್ಥನೆ ನೆರವೇರಿತು. ಕುಂಜತ್ತೂರು ದಾರುಸ್ಸಲಾಂ ಸಲಾಫಿ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಮೊಹಮ್ಮದಲಿ ಸಲಫಿ, ಮಸ್ಜಿದ್ನೂರ್ನಲ್ಲಿ ನಡೆದ ಪ್ರಾರ್ಥನೆಗೆ ಹನೀಸ್ ಮದನಿ ನೇತೃತ್ವ ನೀಡಿದರು.





