ಎಂಡೋಸಲ್ಫಾನ್ ಹೂತಿಡಲಾಗಿದೆಯೇನ  ಎಂಬುದನ್ನು ಪತ್ತೆಹಚ್ಚಲು ಮುಚ್ಚಲಾದ  ಐದು ಬಾವಿಗಳನ್ನು ಅಗೆದು ಪರಿಶೀಲಿಸಲು ಕೇಂದ್ರ ತಂಡ ನಿರ್ದೇಶ

ಕಾಸರಗೋಡು: ಮಾರಕ ಕೀಟ ನಾಶಕವಾದ ಎಂಡೋಸಲ್ಫಾನ್‌ನ್ನು ಹೂತಿಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ರಾಜ್ಯ ತೋಟಗಾರಿಕಾ ನಿಗಮದ ಕಾಸರಗೋಡು (ಪಿ.ಸಿ.ಕೆ.) ಎಸ್ಟೇಟ್‌ಗೊಳಪಟ್ಟ ಪ್ರದೇಶದಲ್ಲಿ ಮುಚ್ಚಲಾಗಿರುವ ಐದು ಬಾವಿಗಳನ್ನು ೧೦೦ ಮೀಟರ್ ಆಳದ ತನಕ ಅಗೆದು ಪರಿಶೀಲಿಸುವಂತೆ ಕೇಂದ್ರ ಸರಕಾರೀ ತಂಡ ನಿರ್ದೇಶ ನೀಡಿದೆ.

ತೋಟಗಾರಿಕಾ ಇಲಾಖೆಯ ಕಾಸರಗೋಡು ಎಸ್ಟೇಟ್‌ಗೊಳಪಟ್ಟ ಮಿಂಚಿಪದವಿನ ಬಾವಿಯಲ್ಲಿ ಎಂಡೋ ಸಲ್ಫಾನ್ ಹಾಕಿ ಅದನ್ನು ಮುಚ್ಚಲಾಗಿದೆ ಎಂಬ ದೂರೊಂದು ರಾಷ್ಟ್ರೀಯ ಹಸಿರು ಟ್ರಿಬ್ಯುನಲ್‌ಗೆ ಲಭಿಸಿತ್ತು. ಅದರಂತೆ ಟ್ರಿಬ್ಯೂನಲ್ ನೀಡಿದ  ನಿರ್ದೇಶದಂತೆ ಕೇಂದ್ರ ಮಲೀನೀಕರಣ ಮಂಡಳಿಯ ದಕ್ಷಿಣ ವಲಯ ನಿರ್ದೇಶಕ  ಡಾ. ಜೆ. ಚಂದ್ರಬಾಬು ನೇತೃತ್ವದ ತಂಡ ಡಿಸೆಂಬರ್ ೨೮ರಂದು ಕಾಸರಗೋಡಿಗೆ ಆಗಮಿಸಿ ಆ ದೂರಿನ ಸಮಗ್ರ ಪರಿಶೀಲನೆ ನಡೆಸಿದೆ.

ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಕೀಟನಾಶಕ ಉಪಯೋಗಿಸತೊಡಗಿದ ೧೯೮೩ರಿಂದ ೨೦೦೧ರ ತನಕದ ಅವಧಿಯಲ್ಲಿ ಕಾಸರಗೋಡು ತೋಟ ಗಾರಿಕಾ ಇಲಾಖೆಗೆ ಸೇರಿದ ಐದು ಬಾವಿಗಳಲ್ಲಿ ಎಂಡೋಸಲ್ಫಾನ್ ಹಾಕಿ ಅವುಗಳನ್ನು ಮುಚ್ಚಲಾಗಿದೆ ಎಂದು ಪ್ರಸ್ತುತ ಎಸ್ಟೇಟ್‌ನ ಅಧಿಕಾರಿಗಳು ಮಲೀನೀಕರಣ ನಿಯಂತ್ರಣ ಮಂಡಳಿಯ ತಂಡಕ್ಕೆ ತಿಳಿಸಿದ್ದಾರೆ.

ಇಂತಹ ಬಾವಿಗಳಲ್ಲಿ ಎಂಡೋ ಸಲ್ಫಾನ್‌ನನ್ನು ಬ್ಯಾರೆಲ್‌ಗಳಲ್ಲಿ ತುಂಬಿಸಿ ಅದನ್ನು ಬಾವಿಯೊಳಗೆ ಇರಿಸಿ ಅಂತಹ ಬಾವಿಗಳನ್ನು ಮುಚ್ಚಲಾಗಿದೆ ಎಂದೂ, ಅಂತಹ ಬಾವಿಗಳ ಪರಿಸರ ವಾಸಿಗಳು ಹೇಳುತ್ತಿದ್ದಾರೆ. ಹೆಚ್ಚು ಕಡಿಮೆ ೨೮೦ ಬ್ಯಾರೆಲ್‌ನಷ್ಟು ಎಂಡೋಸಲ್ಫಾನ್‌ನ್ನು ಕಾಸರಗೋಡು ಜಿಲ್ಲೆಯಲ್ಲಿ ಉಪಯೋ ಗಿಸಲಾಗಿತ್ತು. ಅದರಲ್ಲಿ ಇನ್ನು ೨೦ ಬ್ಯಾರೆಲ್‌ಗಳ ಈಗ ಕಾರ್ಪರೇಷನ್‌ನ ಆದೂರು ಎಸ್ಟೇಟ್‌ನಲ್ಲಿ  ಈಗ ಬಾಕಿ ಉಳಿದುಕೊಂಡಿದೆ. ಆದರೆ ಬಾಕಿ ಬ್ಯಾರೆಲ್‌ಗಳು ಈಗ ಎಲ್ಲಿವೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.

Leave a Reply

Your email address will not be published. Required fields are marked *

You cannot copy content of this page