ಬದಿಯಡ್ಕ: ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಕೂಡಿ ಹಾಕಿ ಪ್ರಾಯಪೂರ್ತಿಯಾಗದ ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ 1,02,000 ರೂಪಾಯಿ ಅಪಹರಿಸಿರುವುದಾಗಿ ದೂರಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿ ಎ.ಎಸ್. ಸುಜಿತ್ ಎಂಬವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಗೋಸ್ತ್ ೨೯ರಂದು ಸಂಜೆ 6 ಗಂಟೆಗೆ ಪೆರ್ಲ ಬಳಿಯ ಉಕ್ಕಿನಡ್ಕದಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಈ ರೀತಿ ತಿಳಿಸಲಾಗಿದೆ-“ ಉಕ್ಕಿನಡ್ಕದಲ್ಲಿ ದೂರುಗಾರನಾದ ಸುಜಿತ್‌ರನ್ನು ೫ ಮಂದಿ ತಂಡ ಮರದ ಬೆತ್ತ ತೋರಿಸಿ ಬೆದರಿಕೆಯೊಡ್ಡಿದೆ. ಅನಂತರ ಅವರನ್ನು ಕಾರಿನಲ್ಲಿ ಅಪಹರಿಸಿ ಚೆರ್ಕಳಕ್ಕೆ ಸಮೀಪದ ಕ್ವಾರ್ಟರ್ಸ್‌ಗೆ ತಲುಪಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು. ಬಳಿಕ ಬೆದರಿಕೆಯೊಡ್ಡಿ ದೂರುಗಾರನನ್ನು ನಗ್ನಗೊಳಿಸಲಾಯಿತು. ಈ ಹೊತ್ತಿನಲ್ಲಿ ಕೊಠಡಿಯಲ್ಲಿದ್ದ ಬಾಲಕಿಯೊಂದಿಗೆ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಲಾಯಿತು. ನಾವು ಕೇಳಿದಷ್ಟು ಹಣ ನೀಡದಿದ್ದಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ತಂಡ ಬೆದರಿಕೆಯೊಡ್ಡಿದೆ. ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ ಬಳಿಕ ದೂರುಗಾರನಿಂದ 1,02,000 ರೂಪಾಯಿಗಳನ್ನು ತಂಡ ಲಪಟಾಯಿಸಿದೆ.ಅನಂತರ ಯುವಕನನ್ನು ಬಿಡುಗಡೆಗೊಳಿಸಲಾಯಿತು”.
ಈ ಘಟನೆಗೆ ಸಂಬಂಧಿಸಿ ಕಂಡರೆ ಪತ್ತೆಹಚ್ಚಬಹುದಾದ ೫ ಮಂದಿ ವಿರುದ್ದ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯಂಗವಾಗಿ ವಿವಿಧೆಡೆ ಗಳಲ್ಲಿರುವ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಲಾಗಿದೆ.






