ಹೆಣ್ಮಕ್ಕಳ ಚಿತ್ರಗಳನ್ನು ಮೋರ್ಫ್ ನಡೆಸಿ ಟೆಲಿಗ್ರಾಂನಲ್ಲಿ ಪ್ರಚಾರ: ಇನ್ನೋರ್ವ ಆರೋಪಿ ಸೆರೆ

ಕಾಸರಗೋಡು: ಹೆಣ್ಮಕ್ಕಳ ಚಿತ್ರಗಳನ್ನು ಅವರಿಗೆ ತಿಳಿಯದಂತೆ ಸಂಗ್ರಹಿಸಿ ತಾಂತ್ರಿಕ ವಿದ್ಯೆಗಳ ಮೂಕ ಮೋರ್ಫ್ ನಡೆಸಿ ಅಶ್ಲೀಲ ಚಿತ್ರಗಳಾಗಿ ಬದಲಾಯಿಸಿ ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಪ್ರಚಾರಗೈದ ಪ್ರಕರಣದಲ್ಲಿ ಪ್ರಧಾನ ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಪುಳಕ್ಕಾಟಿರಿ ನಿವಾಸಿ ನಿಕೇತ್ (24) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತ ಈ ಪ್ರಕರಣದಲ್ಲಿ ೨ನೇ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

೧ನೇ ಆರೋಪಿಯಾದ ಇರಿಯಣ್ಣಿ ನಿವಾಸಿ ಅನೂಪ್ ಎಂಬಾತನನ್ನು ಈ ಮೊದಲು ಸೆರೆ ಹಿಡಿಯಲಾಗಿತ್ತು. ಬಳಿಕ ನಡೆಸಿದ ಸಮಗ್ರ ತನಿಖೆಯಲ್ಲಿ ೧ನೇ ಆರೋಪಿ ನೀಡಿದ ಹೆಣ್ಮಕ್ಕಳ ಫೊಟೋಗಳನ್ನು ಎಡಿಟ್ ಮಾಡಿ ಅಶ್ಲೀಲ ಚಿತ್ರಗಳಾಗಿ ಬದಲಾಯಿಸಿರುವುದು ಮಲಪ್ಪುರಂ ನಿವಾಸಿಯಾಗಿದ್ದಾನೆಂದು ತಿಳಿದು ಬಂದಿದೆ. ಸೆ.೨೫ರಂದು ಪುಳಕ್ಕಾಟಿರಿ ಎಂಬಲ್ಲಿಂದ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಬಳಿಕ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತಲುಪಿಸಿ ತನಿಖೆಗೊಳಪಡಿಸಿದ ಬಳಿಕ ಬಂಧನ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ಅಕ್ಟೋಬರ್ ೯ರವರೆಗೆ ರಿಮಾಂಡ್ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಡಿಜಿಟಲ್ ಉಪಕರಣಗಳು, ಇಲೆಕ್ಟ್ರೋನಿಕ್ ದಾಖಲೆಗಳು, ಟೆಲಿಗ್ರಾಂ ಗ್ರೂಪ್‌ಗಳ ಮಾಹಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page