ಕುಂಬಳೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳಕ್ಕೆ ಬಂದಾಗ ಕಪ್ಪು ಬಾವುಟ ತೋರಿಸಿ ದೇಶದ ಭದ್ರತೆಗೆ ಸವಾಲೊಡ್ಡಿದ ಹಾಗೂ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ರಿಗೆ ನೆಯ್ಯಾಟಿಂಗರದಲ್ಲಿ ತಡೆಯೊಡ್ಡಿ ಅವರ ವಾಹನಕ್ಕೆ ಹಾನಿಗೈದು ಬಿಯರ್ ಬಾಟ್ಲಿ ಎಸೆದು ಶಾರೀರಿಕ ವಾಗಿ ಹಲ್ಲೆಗೆ ಮುಂದಾಗಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಬಿಜೆಪಿ ಕುಂಬಳೆ ಮಂಡಲ ಮತ್ತು ಪಂಚಾಯತ್ ಸಮಿತಿಗಳ ನೇತೃತ್ವದಲ್ಲಿ ಕುಂಬಳೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಿ. ವಿಕ್ರಂ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್ ಮಾತನಾಡಿ ಕಾಂಗ್ರೆಸ್ ಪಕ್ಷದ ದೇಶವಿರೋಧಿ ಹಾಗೂ ಜನವಿರೋಧಿ ನೀತಿ ಖಂಡನೀಯ ಎಂದರು. ನೇತಾರರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಹರೀಶ್ ಕುದ್ರೆಪ್ಪಾಡಿ, ಮುರಳೀಧರ ಯಾದವ್, ಸುಜಿತ್ ರೈ, ಶಿವಪ್ರಸಾದ್ ರೈ ಸಹಿತ ಜನಪ್ರತಿನಿಧಿ ಗಳು, ಕಾರ್ಯಕರ್ತರು ಭಾಗವಹಿಸಿ ದರು. ಮಹೇಶ್ ಪುಣಿಯೂರು ಸ್ವಾಗತಿಸಿ, ದಿನೇಶ್ ಮುಳಿಂಜ ವಂದಿಸಿದರು.






