ಸೀತಾಂಗೋಳಿ: ಕೋಳಿ ತ್ಯಾಜ್ಯ ತುಂಬಿದ ಹೊಂಡಕ್ಕೆ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ಅನಂತಪುರದ ಫ್ಯಾಕ್ಟರಿಯೊಂದರಲ್ಲಿ ನಡೆದಿದೆ. ಅನಂತಪುರ ಉದ್ದಿಮೆ ಎಸ್ಟೇಟ್‌ನ ಆಕ್ಸಿಜನ್ ಪ್ರೊಮಾಕ್ಸ್ ಫ್ಯಾಕ್ಟರಿಯಲ್ಲಿ ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ. ಫ್ಯಾಕ್ಟರಿಯ ಕಾರ್ಮಿಕನಾದ ಒಡಿಸ್ಸಾ ನಿವಾಸಿ ಮಹೇಶ್ವರ್ (16) ಮೃತಪಟ್ಟ ದುರ್ದೈವಿ. ಗಂಭೀರ ಗಾಯಗೊಂಡ ತನೂಜ್ (24) ಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ, ಸಿದ್ಧಾನಂದ (21)ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕೆಲಸ ನಿರ್ವಹಿಸುವ ಫ್ಯಾಕ್ಟರಿಯಲ್ಲಿ ಕೋಳಿ ತ್ಯಾಜ್ಯಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಫ್ಯಾಕ್ಟರಿಯ ಬಾಯ್ಲರ್‌ನಿಂದ ಗ್ಯಾಸ್ ಅಪರಿಮಿತವಾಗಿ ಹೊರಗೆ ಹರಿದಿದ್ದು, ಈ ವೇಳೆ ಅಲ್ಲಿದ್ದ ಮಹೇಶ್ವರ್ ತ್ಯಾಜ್ಯದ ಹೊಂಡಕ್ಕೆ ಬಿದ್ದಿದ್ದಾನ. ಆತನನ್ನು ರಕ್ಷಿಸಲು ನಡೆಸಿದ ಯತ್ನ ವೇಳೆ ಮತ್ತಿಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಫ್ಯಾಕ್ಟರಿಯ ಇತರ ಕಾರ್ಮಿಕರು ತಲುಪಿ ಹೊಂಡದಿಂದ ಮೂವರನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಮಹೇಶ್ವರ್ ಆಸತ್ರೆಯಲ್ಲಿ ಮೃತಪಟ್ಟಿದ್ದಾನೆ.






