ಅಕ್ರಮ ಹಣ ವರ್ಗಾವಣೆ ಪ್ರಕರಣ: ಎರಡು ಎಫ್‌ಐಆರ್ ದಾಖಲಿಸಿದ ವಿಜಿಲೆನ್ಸ್ ಪಿಣರಾಯಿ ವಿಜಯನ್ ಒಂದನೇ ಆರೋಪಿ

ತಿರುವನಂತಪುರ: ರಾಜ್ಯದಲ್ಲಿ  ಭಾರೀ ಕೋಲಾಹಲ ಸೃಷ್ಟಿಸಿದ ಸಿಎಂಆರ್‌ಎಲ್  ಮತ್ತು ವೀಣಾ ವಿಜಯನ್ ಮಾಲಕತ್ವದ ಎಕ್ಸಾಲೋಜಿಕ್ ಸೊಲ್ಯೂಶನ್  ಸಂಸ್ಥೆಯ ಮಧ್ಯೆ ನಡೆದಿದೆ ಎನ್ನಲಾಗಿರುವ ಕೋಟಿಗಟ್ಟಲೆ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮತ್ತು ಕಾಳಧನ ವ್ಯವಹಾರ ಆರೋಪಕ್ಕೆ ಸಂಬಂಧಿಸಿ ರಾಜ್ಯ ವಿಜಿಲೆನ್ಸ್   ಆಂಡ್ ಆಂಟಿ ಕರಪ್ಶನ್ ಬ್ಯೂರೋ   ಎರಡು ಎಫ್‌ಐಆರ್‌ಗಳನ್ನು  ದಾಖಲಿಸಿಕೊಂಡಿದೆ.

 ಭ್ರಷ್ಟಾಚಾರ ತಡೆ ಕಾನೂನು ಮತ್ತು ಕಾಳಧನ ವ್ಯವಹಾರ ತಡೆ  ಕಾನೂನು ಪ್ರಕಾರ ಈ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹೈಕೋರ್ಟ್‌ನ ಏಕ ಸದಸ್ಯಪೀಠ ನೀಡಿದ ನಿರ್ದೇಶ ಪ್ರಕಾರ ಈ ಪ್ರಕರಣ  ದಾಖಲಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಿಸಲಾದ ಮೊದಲನೇ ಎಫ್‌ಐಆರ್‌ನಲ್ಲಿ  ಮಾಜಿ ಮುಖ್ಯಮಂತ್ರಿ ಹಾಗೂ ಈಗ ವಿರೋಧಪಕ್ಷ ನಾಯಕನಾಗಿರುವ ಪಿಣರಾಯಿ ವಿಜಯನ್‌ರನ್ನು ಒಂದನೇ ಆರೋಪಿ ಹಾಗೂ ಅವರ ಪುತ್ರಿ ವೀಣಾ ವಿಜಯನ್‌ರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. 

ಎರಡನೇ ಎಫ್‌ಐಆರ್‌ನಲ್ಲಿ ಪಿಣರಾಯಿ ವಿಜಯನ್‌ರ ಅಳಿಯ ಮಾಜಿ  ಸಚಿವ ಪಿ.ಎ. ಮುಹಮ್ಮದ್ ರಿಯಾಸ್‌ರನ್ನು ಒಂದನೇ ಆರೋಪಿ ಹಾಗೂ ಪತ್ನಿ ವೀಣಾ ವಿಜಯನ್‌ರನ್ನು ಎರಡನೇ ಆರೋಪಿಯನ್ನಾಗಿ ಕೇಸು ದಾಖಲಿಸಲಾಗಿದೆ. ಹೀಗೆ ವೀಣಾ ವಿಜಯನ್ ಈ ಎರಡು ಎಫ್‌ಐಆರ್‌ಗಳಲ್ಲೂ ಎರಡನೇ ಆರೋಪಿಯಾಗಿದ್ದಾರೆ.

 ಅಕ್ರಮ ಹಣ ವರ್ಗಾವಣೆ ಹಾಗೂ ಕಾಳಧನ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಪಿಣರಾಯಿ ವಿಜಯನ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ದಿನಗಳ ಹಿಂದೆ ನಿರ್ದೇಶ ನೀಡಿತ್ತು. ಅದರಂತೆ ಈ ಮೂವರ ವಿರುದ್ಧ ವಿಜಿಲೆನ್ಸ್ ಪ್ರಕರಣ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಏಕ ಸದಸ್ಯ ಪೀಠ ನೀಡಿರುವ ನಿರ್ದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ತಯಾರಿಯಲ್ಲೂ ಪಿಣರಾಯಿ ವಿಜಯನ್ ತೊಡಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಶಾಜಹಾನ್ ನೀಡಿದ ದೂರಿನಂತೆ ಪಿಣರಾಯಿ ವಿಜಯನ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಏಕ ಸದಸ್ಯ ಪೀಠ ನಿರ್ದೇಶ ನೀಡಿದೆ.

RELATED NEWS

You cannot copy contents of this page