ವರ್ಕಾಡಿ: ಕಾಸರಗೋಡು ಜಿಲ್ಲಾ ಪಂಚಾಯತು ನಿಧಿಯಿಂದ 2೦ ಲಕ್ಷ ರೂ. ವ್ಯಯಿಸಿ ಕಾಂಕ್ರಿಟೀಕರಣ ಗೊಳ್ಳುತ್ತಿರುವ ವರ್ಕಾಡಿ ಪಂಚಾಯತ್ನ ಪೆರ್ಮನಂಜಿ -ಮುಡಿಮಾರು ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿ ಹಾಳುಗೆಡಹಿದ ವಿಕೃತ ಘಟನೆ ಜರಗಿದೆ. ಅಕ್ಟೋಬರ್ 14ರಂದು ರಾತ್ರಿ ಎಂಟು ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದ್ದು, ಆಟೋರಿಕ್ಷಾ ಹಾಗೂ ಇನ್ನೋವಾ ಕಾರು ಕಾಮಗಾರಿ ನಡೆಯುತ್ತಿದ್ದ ಕಾಂಕ್ರೀಟ್ ರಸ್ತೆಯಲ್ಲಿ ಹಾಕಲಾಗಿದ್ದ ತಡೆಗಳನ್ನು ತೆರವುಗೊಳಿಸಿ ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆಯೇ ಚಲಾಯಿಸಿ ಹಾನಿಗೊಳಿಸಿದ ಘಟನೆ ನಡೆದಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ವಾಹನಗಳು ಸಂಚರಿಸದAತೆ ತಡೆಗೋಡೆಗಳನ್ನು ನಿರ್ಮಿಸಿದ್ದರು. ಅದನ್ನು ತೆರವುಗೊಳಿಸಿ ಈ ಕೃತ್ಯವನ್ನು ಮಾಡಲಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ. ಕಳೆದ ನಾಲ್ಕು ದಿವಸಗಳಿಂದ ಈ ರಸ್ತೆಗೆ ಕಾಂಕ್ರಿಟೀಕರಣ ನಡೆಯುತ್ತಿದ್ದು, ವಾಹನಗಳು ಸಂಚರಿಸದAತೆ ಸೂಚನಾ ಫಲಕವನ್ನು ಕೂಡ ಅಳವಡಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತು ಸದಸ್ಯ ಹರ್ಷಾದ್ ವರ್ಕಾಡಿ ತಿಳಿಸಿದ್ದಾರೆ. ಆರೋಪಿಗಳನ್ನು ತಕ್ಷಣವೆ ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತು ಅಧ್ಯಕ್ಷ ಸಾಬು ಅಬ್ರಹಾಂರಲ್ಲಿ ಹರ್ಷಾದ್ ಆಗ್ರಹಿಸಿದ್ದಾರೆ.







