ಜಗತ್ತಿಗೆ ಜಗದ್ಗುರುವಾಗುವ ಭಾವ ಸ್ವಯಂಸೇವಕನ  ಮನದಲ್ಲಿ ಮೂಡಬೇಕು-ಕಜಂಪಾಡಿ ಸುಬ್ರಹ್ಮಣ್ಯ ಭಟ್

ಬದಿಯಡ್ಕ: ಜಗತ್ತಿಗೆ ಜಗದ್ಗುರು ವಾಗುವ ಭಾವ ಪ್ರತಿಯೊಬ್ಬ ಸ್ವಯಂ ಸೇವಕನ ಮನದಲ್ಲಿ ಮೂಡಿಬಂದಾಗ ಭಾರತ ವಿಶ್ವವಂದ್ಯವಾಗುತ್ತದೆ. ಜಗತ್ತಿನಲ್ಲಿರುವ ಆಸುರಿ ಮಾನಸಿಕತೆ ದೂರವಾಗಬೇಕು. ನಕಾರಾತ್ಮಕ ಯೋ ಚನೆ, ಯೋಜನೆಗಳು ಒಂದುಗೂಡುವ ಈ ಕಾಲಘಟ್ಟದಲ್ಲಿ ಸಕಾರಾತ್ಮಕ ಯೋ ಚನೆಯ ಮನಸ್ಸುಗಳು ಒಂದುಗೂಡಿ ಅವುಗಳನ್ನು ಹೋಗಲಾಡಿಸಬೇಕು ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಆರ್‌ಎಸ್‌ಎಸ್ ನೀರ್ಚಾಲು ಮಂಡಲ ವಿಜಯದಶಮಿ ಉತ್ಸವದ ಪಥಸಂಚನ ಹಾಗೂ ನೀರ್ಚಾಲು ಶಾಲಾ ಮೈದಾನದಲ್ಲಿ ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು ಬೌದ್ಧಿಕ್ ನೀಡಿದರು. ಕುಟುಂಬ ಸಂಸ್ಕೃತಿ ಉಳಿಯಬೇಕು. ಪರಸ್ಪರ ಸಾಮರಸ್ಯ ಬೆಸೆಯಬೇಕು ಎಂದು ತಿಳಿಸಿದ ಅವರು ಕಾಸರಗೋಡಿನ ಕನ್ನಡವೂ ಕೇರಳದ ಮಲಯಾಳವೂ ಒಂದೇ ತಾಯಿಯ ಮಕ್ಕಳೇ ಆಗಿದ್ದಾರೆ. ಎರಡನ್ನೂ ಪ್ರೀತಿಯಿಂದ ಸಲಹಬೇಕು. ಪರಸ್ಪರ ಸಾಮರಸ್ಯದಿಂದ ಮುಂದುವರಿಯಬೇಕು. ಜಾತಿಯ ಹೆಸರಿನಲ್ಲಿ ಗೊಂದಲವಿಲ್ಲದೆ ಎಲ್ಲರ ಮನೆಯಲ್ಲೂ ಎಲ್ಲರಿಗೂ ಪ್ರವೇಶವಿರಬೇಕು. ನಮ್ಮ ಸಂಸ್ಕೃತಿಯ ಜೊತೆಗೆ ವ್ಯವಹಾರವೂ ಸ್ವದೇಶಿಯಾಗ ಬೇಕು. ನಮ್ಮ ಹತ್ತಿರದ ಮನೆಯಲ್ಲೂ ಸ್ವದೇಶೀ ಮಾನಸಿಕತೆಯನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಸ್ವಯಂಸೇವಕನಿಗಿದೆ ಎಂದು ಅವರು ನುಡಿದರು.
ಮುಖ್ಯ ಅತಿಥಿಯಾಗಿ ಉಳ್ಳೋಡಿ ಕೊರಗಜ್ಜ ಸನ್ನಿಧಿಯ ಗಣೇಶ್ ಉಳ್ಳೋಡಿ ಮಾತನಾಡಿದರು. ಬದಿಯಡ್ಕ ಖಂಡ ಸಂಘಚಾಲಕ್ ರಮೇಶ್ ಕಳೇರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಕ್ರಮ ಹಾಗೂ ಕೇಸರಿ ಪತ್ರಿಕೆಯ ಚಂದಾದಾರರಾದ ಜಯದೇವ ಖಂಡಿಗೆ, ರಾಜೇಶ್ ಏಣಿಯರ್ಪು ಅವರಿಗೆ ರಶೀದಿ ವಿತರಿಸಲಾಯಿತು. ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡು ಕಲ್ಲು, ಜಿಲ್ಲಾ ಸಹಕಾರ್ಯವಾಹ ರಾಹುಲ್ ಉದಯಗಿರಿ ಹಾಗೂ ಹಲವರು ಪಾಲ್ಗೊಂಡಿದ್ದರು. ಬೇಳ ವಿಷ್ಣುಮೂರ್ತಿ ನಗರದಿಂದ ಪಥಸಂಚಲನ ನಡೆಯಿತು.

You cannot copy contents of this page