ಕಣಿಪುರ ಕ್ಷೇತ್ರದಲ್ಲಿ ದೇವರುಗಳ ಪುನಃ ಪ್ರತಿಷ್ಠೆ ಇಂದು ಮಧ್ಯಾಹ್ನ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಂಭ್ರಮದಿಂದ ಜರಗುತ್ತಿದ್ದು, ಊರ-ಪರವೂರ ಸಾವಿರಾರು ಮಂದಿ ಭಾಗವಹಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕಾರ್ಯಕ್ರಮದಂಗವಾಗಿ ಇಂದು ಪ್ರಾತಃಕಾಲ ೧೦೮ ತೆಂಗಿನಕಾಯಿ ಗಣಹೋಮ ನಡೆಯಿತು. ಮಧ್ಯಾಹ್ನ ೧೨.೨೧ರಿಂದ ೧.೪೨ರ ತನಕ ಶ್ರೀ ಗೋಪಾಲಕೃಷ್ಣ, ಶ್ರೀ ಗಣಪತಿ, ಶ್ರೀ ವನಶಾಸ್ತಾರ ದೇವರ ಪುನಃ ಪ್ರತಿಷ್ಠೆ, ಉಪದೇವತೆಗಳ ಪ್ರತಿಷ್ಠೆ, ಶ್ರೀ ನಾಗದೇವರು, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಗುಳಿಗ ದೈವಗಳ ಪ್ರತಿಷ್ಠಾ ಬಲಿ, ರಾತ್ರಿ ೭ರಿಂದ ಅಂಕುರ ಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಒಳ ವೇದಿಕೆಯಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್ ನಡೆಯುತ್ತಿದೆ. ಹೊರವೇದಿಕೆಯಲ್ಲಿ ಮಧ್ಯಾಹ್ನ ೧.೩೦ರಿಂದ ಮಜಿಬೈಲು ಶ್ರೀ ವಿಷ್ಣು ಯಕ್ಷಬಳಗದಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೭.೩೦ರಿಂದ ಶ್ರೀ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾರ್ಪಣಂ, ೧೦ರಿಂದ ಶೇಡಿಕಾವು ಕಲಾ ಸಂಗಮದವರಿಂದ ಪೌರಾಣಿಕ ತುಳು ನಾಟಕ ನಡೆಯಲಿದೆ.
ಸಂಜೆ ೪ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲಶ್ರೀ ಧಾಮದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಕ್ಷೇತ್ರ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸುವರು. ದೈವನರ್ತಕ ಡಾ. ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡುವರು. ಕೇಂದ್ರ ಸಚಿವ ವಿ. ಮುರಳೀಧರನ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸಹಿತ ಹಲವರು ಗಣ್ಯರು ಮುಖ್ಯ ಅತಿಥಿಗಳಾಗಿರುವರು.