ಅಂಗನವಾಡಿಯ ಆವರಣಗೋಡೆ ಕುಸಿದು ಒಂದು ವರ್ಷ ಕಳೆದರೂ ಮರು ನಿರ್ಮಾಣಕ್ಕೆ ಕ್ರಮವಿಲ್ಲ: ಅಪಾಯಭೀತಿ; ಮಕ್ಕಳಿಗೆ  ಬಾಡಿಗೆ ಮನೆಯಲ್ಲಿ ಕಲಿಕೆ

ಪೈವಳಿಕೆ: ಮಳೆಗಾಲದಲ್ಲಿ ಅಂಗನವಾಡಿಯ ಆವರಣಗೋಡೆ ಕುಸಿದು ಬಿದ್ದು ವರ್ಷ ಕಳೆದರೂ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಊರವರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಪೈವಳಿಕೆ ಪಂಚಾಯತ್ ೬ನೇ ವಾರ್ಡ್‌ನ ನೆತ್ತರಗುಳಿ ಅಂಗನವಾಡಿಯ ಆವರಣಗೋಡೆ  ಒಂದು ವರ್ಷ ಹಿಂದೆ  ಕುಸಿದು ಬಿದ್ದಿದೆ.  ಕಲ್ಲುಕಟ್ಟಿದ ಒಂದು ಬದಿಯ ಅರ್ಧ ಭಾಗ ಆವರಣಗೋಡೆ ೨೦೨೨ ಜೂನ್ ತಿಂಗಳಲ್ಲಿ  ಭಾರೀ ಮಳೆಯ ಸಂದರ್ಭದಲ್ಲಿ ಕುಸಿದು ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕುಸಿದು ಬಿದ್ದ ಭಾಗದಲ್ಲಿ ಭಾರೀ ಆಳದ ಹೊಂಡವಿದ್ದು,  ಇದರಿಂದ ಮಕ್ಕಳಿಗೆ ಅಪಾಯ ಭೀತಿ ಎದುರಾಗಿದೆ.  ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂದೇ ಅಂಗನವಾಡಿಯನ್ನು ಬಾಡಿಗೆ ಮನೆಗೆ ಸ್ಥಳಾಂತರಗೊಳಿಸಿತ್ತು. ಕೂಡಲೇ ಗೋಡೆ ನಿರ್ಮಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ  ಆವರಣಗೋಡೆ ಕುಸಿದು ಮುಂದಿನ ಜೂನ್ ತಿಂಗಳಿಗೆ ಎರಡು ವರ್ಷಗಳು ಸಂದುತ್ತಿದ್ದರೂ. ಇದುವರೆಗೂ  ಆವರಣಗೋಡೆ ನಿರ್ಮಾಣಕ್ಕೆ ಕ್ರಮ ಉಂಟಾಗಿಲ್ಲವೆಂದು ಊರವರು ಆರೋಪಿಸಿದ್ದಾರೆ.  ಈ ಬಗ್ಗೆ ಅಂಗನವಾಡಿ ಕಮಿಟಿ, ಶಿಕ್ಷಕಿ, ಊರವರು  ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲವೆಂದು ಆರೋಪಿಸಲಾಗಿದೆ.

ಇದೇ ವೇಳೆ ಪಂಚಾಯತ್‌ನಿಂದ  ೨ ಲಕ್ಷ ರೂ. ದುರಸ್ತಿಗೆ ಮೀಸಲಿರಿಸಿರುವು ದಾಗಿಯೂ ಹೇಳಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭ ಗೊಂಡರೆ  ಉಳಿದ ಗೋಡೆ ಹಾಗೂ ಅಂಗನವಾಡಿಯ ಅಡಿಪಾಯ ಕುಸಿದು ಬೀಳುವ ಸಾಧ್ಯತೆ ಇದೆಯೆಂದೂ ಸಂಬಂಧಪಟ್ಟ ಅಧಿಕಾರಿಗಳು  ಶೀಘ್ರವಾಗಿ ಆವರಣಗೋಡೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸುವುದಾಗಿ ಊರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page