ಸಂತೆಯಲ್ಲಿ ಪರ್ಧಾ ಧರಿಸಿ ತಿರುಗಾಡುತ್ತಿದ್ದ ಯುವಕ ಸೆರೆ

ಕುಂಬಳೆ:  ಜಾತ್ರೆಯ  ಸಂತೆ ಹಾಗೂ ಪರಿಸರ ಪ್ರದೇಶಗಳಲ್ಲಿ ಪರ್ಧಾ ಧರಿಸಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಯುವಕನನ್ನು ಸೆರೆಹಿಡಿಯಲಾಗಿದೆ. ಮಾಯಿಪ್ಪಾಡಿ ನಿವಾಸಿ ಶಶಿಕಾಂತ್ (೪೨) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊ ಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ  ೯.೩೦ರ ಕುಂಬಳೆಯಲ್ಲಿ ಘಟನೆ ನಡೆದಿದೆ.   ಪರ್ದಾ ಧರಿಸಿದ ವ್ಯಕ್ತಿ  ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದುದನ್ನು  ಕೆಲವು ಯುವಕರು ಗಮನಿಸಿದ್ದಾರೆ. ಬಳಿಕ ವ್ಯಕ್ತಿಯ ಚಲನವಲನದಲ್ಲಿ ಮತ್ತಷ್ಟು ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ  ಆ ವ್ಯಕ್ತಿಯನ್ನು ಹಿಂಬಾಲಿಸಿದ್ದಾರೆ.  ಕೊನೆಗೆ ಕ್ಷೇತ್ರ ರಸ್ತೆ ಮೂಲಕ ನಡೆದು ರಾಷ್ಟ್ರೀಯ ಹೆದ್ದಾರಿಗೆ ತಲುಪಿದ ವ್ಯಕ್ತಿ   ಹೆದ್ದಾರಿಯ ಆವರಣಗೋಡೆ ಹಾರಿ ಹೋಗಿದ್ದನು. ಈ ವ್ಯಕ್ತಿಯ ನಡತೆಯಿಂದ ಸಂಶಯಗೊಂಡ ಯುವಕರು ಕೂಡಾ ಆತನನ್ನು ಹಿಂಬಾಲಿಸಿದ್ದರು.  ರಾಷ್ಟ್ರೀಯ ಹೆದ್ದಾರಿಯ  ಮತ್ತೊಂದು ಭಾಗಕ್ಕೆ ತಲುಪಿ ಪರ್ಧಾ ಕಳಚಿ ಅಲ್ಲಿ ನಿಲ್ಲಿಸಿದ್ದ ಕಾರಿಗೆ ಹತ್ತಲು ಯತ್ನಿಸುತ್ತಿದ್ದಂತೆ ಯುವಕರು ಆತನನ್ನು ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪರ್ಧಾ ಧರಿಸಿ ತಲುಪಿದ ವ್ಯಕ್ತಿಯ ಉದ್ದೇಶವೇನೆಂದು ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page