ನೌಕಾ ಪಡೆಯ ಬೃಹತ್ ಕಾರ್ಯಾಚರಣೆ: ೩೩೦೦ ಕೆ.ಜಿ ಮಾದಕವಸ್ತು ವಶ: ಐವರುಪಾಕ್ ಪ್ರಜೆಗಳ ಸೆರೆ
ಅಲಹಾಬಾದ್: ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುಜರಾತ್‌ನ ಪೋರ್‌ಬಂದರ್ ಕರಾವಳಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹಡಗಿನಲ್ಲಿ ಸಾಗಿಸುತ್ತಿದ್ದ ಬರೋಬರಿ ೩,೩೦೦ ಕೆ.ಜಿ ಮಾದಕವಸ್ತುಗಳನ್ನು ವಶಪಡಿಸಲಾಗಿದೆ. ಇದು ಇತ್ತೀಚೆಗಿನ ಬೃಹತ್ ಪ್ರಮಾಣದ ಡ್ರಗ್ ವಶ ಕಾರ್ಯಾಚರಣೆಯಾಗಿದೆ. ವಶಪಡಿಸಲಾದ ಮಾಲಿನಲ್ಲಿ ೩೦೮.೯ ಕೆ.ಜಿ ಚರಸ್, ೧೫೮ ಕೆ.ಜಿ ಮೆಥಾಂಫೆಟಾಮೈನ್ ಹಾಗೂ ೨೫ ಕೆ.ಜಿ ಮಾರ್ಫಿನ್ ಎಂಬ ಮಾದಕವಸ್ತುಗಳು ಒಳಗೊಂಡಿವೆ. ಇದನ್ನು ಸಣ್ಣ ಹಡಗಿನಲ್ಲಿ ಭಾರತಕ್ಕೆ ಕಳ್ಳಸಾಗಾಟ ನಡೆಸಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿ ಆ ಹಡಗಿನಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ. ಹಡಗು ಮತ್ತು ಆರೋಪಿಗಳನ್ನು ಬಳಿಕ ಕಾನೂನು ನಿರ್ದೇಶನಾಲಯ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ. ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಕೂಡಾ ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ.