ಕರ್ನಾಟಕ ವಿಧಾನಸೌಧದಲ್ಲಿ ಪಾಕ್‌ಪರ ಘೋಷಣೆ: ತನಿಖೆಗಾಗಿ ೩ ವಿಶೇಷ ತಂಡ ರಚನೆ
ಬೆಂಗಳೂರು: ಬೆಂಗಳೂರು ವಿಧಾನಸೌಧದಲ್ಲಿ ನಿನ್ನೆ ಪಾಕ್‌ಪರ ಘೋಷಣೆ ಆರೋಪ ಕೇಳಿಬಂದಿರುವ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆಯೆಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಸಿರ್ ಹುಸೇನ್ ಅವರ ಗೆಲುವು ಘೋಷಿಸಿದ ಬೆನ್ನಲ್ಲೇ ಅವರ ಜತೆಗಿದ್ದ ಬೆಂಗಾವಲಿಗರು ಅವರಿಗೆ ಜೈಕಾರ ಮೊಳಗಿಸುತ್ತಿದ್ದ ವೇಳೆಯಲ್ಲೇ ಯಾರೋ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆಂಬ ಆರೋಪ ಉಂಟಾಗಿತ್ತು. ಆದ್ದರಿಂದ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿ ಸಂಗ್ರಹವಾಗಿದ್ದು, ಟೆಕ್ನಿಕಲ್ ಅನಾಲಿಸಿಸ್ ಹಾಗೂ ವೀಡಿಯೋ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ಪಾಕ್ ಪರ ಘೋಷಣೆ ಕೂಗಿದವರ ಶೋಧವನ್ನು ವಿಧಾನಸೌಧ ಪೊಲೀಸರು ಆರಂಭಿಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆಯೊಂದಿಗೆ ಇನ್ನೊಂದೆಡೆ ರಂಗಕ್ಕಿಳಿದಿವೆ. ಕಾಂಗ್ರೆಸ್ ರಾಜ್ಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ಸುತ್ತುವರಿದು ಅಲ್ಲೂ ಪ್ರತಿಭಟನೆ ಸಲ್ಲಿಸಿದ್ದಾರೆ.