ಮನೋರೋಗಿಯ ಪರಾಕ್ರಮ: ಸ್ಕೂಟರ್ ಢಿಕ್ಕಿ ಹೊಡೆಸಿ ಪಾದಚಾರಿಯ ತೊಡೆ ಎಲುಬು ಮುರಿತ

ಕಾಸರಗೋಡು: ಮಾನಸಿಕವಾಗಿ ಅಸ್ವಸ್ಥಗೊಂಡಿರುವ ವ್ಯಕ್ತಿಯೋರ್ವ ನಡೆಸಿದ ಪರಾಕ್ರಮದಿಂದ ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ನರಹತ್ಯಾಯತ್ನಕ್ಕೆ ಕೇಸು ದಾಖಲಿಸಿಕೊಂಡು ಪೊಲೀಸರು ಹಲ್ಲೆ ಗೈದ ವ್ಯಕ್ತಿಯನ್ನು ಕಲ್ಲಿಕೋಟೆಯ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ.

ಕಳೆದ ದಿನ ತಳಂಗರೆ ಹಾಗೂ ಪೊವ್ವಲ್ ಮಾಸ್ತಿಕುಂಡ್‌ನಲ್ಲಿ ಘಟನೆ ನಡೆದಿದೆ. ಮುಂಜಾನೆ ೩ ಗಂಟೆ ವೇಳೆ ಮಾಲಿಕ್ ದೀನಾರ್ ನಗರದಲ್ಲಿ  ಓರ್ವನಿಗೆ ಹಲ್ಲೆಗೈದ ಬಳಿಕ ಸ್ಕೂಟರ್‌ನಲ್ಲಿ ಮಾಸ್ತಿಕುಂಡ್‌ಗೆ ತಲುಪಿದ ಯುವಕ   ಮಾಸ್ತಿಕುಂಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಬ್ರಾಹಿಂ ಎಂಬವರನ್ನು ದೂಡಿ ಹಾಕಿದ್ದಾನೆ. ರಸ್ತೆ ಬದಿ ನಡೆದು ಹೋಗುತ್ತಿದ್ದ ಇಬ್ರಾಹಿಂರನ್ನು ದೂಡಿ ಹಾಕಿದ ದುಷ್ಕರ್ಮಿ ಬಳಿಕ ಅವರ ದೇಹದ ಮೇಲೆ ಸ್ಕೂಟರ್ ಹತ್ತಿಸಿ ಕೊಲೆಗೈಯ್ಯಲು ಯತ್ನಿಸಿರುವುದಾಗಿ ಹೇಳಲಾಗುತ್ತಿದೆ. ಹಲ್ಲೆಯಿಂದ ತಪ್ಪಿಸಿಕೊಂಡು  ಪರಾರಿ ಯಾಗಲು ಯತ್ನಿಸುತ್ತಿದ್ದಾಗ ಇಬ್ರಾಹಿಂರ ದೇಹದ ಮೇಲೆ ಆತ ಸ್ಕೂಟರನ್ನು ಹತ್ತಿಸಿದ್ದು, ಇದರಿಂದ ಅವರ ತೊಡೆಯ ಎಲುಬು ತುಂಡಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅನಂತರ ಕಾಸರಗೋಡಿಗೆ ತಲುಪಿದ ವ್ಯಕ್ತಿ ಅಲ್ಲಿಯೂ ಹಲ್ಲೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಹಾಗೂ ನಾಗರಿಕರು ಸೇರಿ ಹಿಡಿದು ಆಸ್ಪತ್ರೆಗೆ ತಲುಪಿಸಿದ್ದಾರೆ. ಆಸ್ಪತ್ರೆಯಲ್ಲೂ ಯುವಕ   ಪರಾಕ್ರಮ ತೋರಿಸಲು ಯತ್ನಿಸಿದ್ದಾನೆ. ಇದರಿಂದ ಔಷಧಿ ನೀಡಿ ಡಿವೈಎಸ್‌ಪಿ ಯ ನಿರ್ದೇಶ ಪ್ರಕಾರ ಆರೋಗ್ಯ ಕಾರ್ಯಕರ್ತರ ಸಹಾಯದೊಂದಿಗೆ ಕುದಿರವಟ್ಟಕ್ಕೆ ಕೊಂಡೊಯ್ಯಲಾಯಿತು.

ಕಾಸರಗೋಡು, ಆದೂರು ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ನಡೆದ ಹಲ್ಲೆ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡಿರುವ ಯುವಕ ಈತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page