ಕುಂಬಳೆ: ಬೈಕ್‌ನ ಟಯರ್‌ಗೆ ಗಾಳಿ ತುಂಬಿಸುವ ವಿಷಯದಲ್ಲಿ ಉಂಟಾದ ವಾಗ್ವಾದ ಹೊಡೆದಾಟದಲ್ಲಿ ಕೊನೆಗೊಂಡಿದೆ. ಇದರ ಪರಿಣಾಮ ಟಯರ್ ಅಂಗಡಿ ಮಾಲಕ ಸಹಿತ ಇಬ್ಬರು ಗಾಯಗೊಂಡಿದ್ದಾರೆ.
ಉಪ್ಪಳ ಮಣ್ಣಂಗುಳಿ ನಿವಾಸಿ ಮಣ್ಣಂಗುಳಿ ಟಯರ್ ಅಂಗಡಿ ಮಾಲಕನಾದ ಅಬ್ದುಲ್ ಮಜೀದ್ (೬೩), ಮಣ್ಣಂಗುಳಿ ನಿವಾಸಿ ಮೂಸ (೬೦) ಎಂಬವರು ಗಾಯಗೊಂಡಿದ್ದು, ಈ ಇಬ್ಬರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೂಸ ನಿನ್ನೆ ತನ್ನ ಬೈಕ್‌ನ ಟಯರ್‌ಗೆ ಗಾಳಿ ತುಂಬಿಸಲೆಂದು ಅಬ್ದುಲ್ ಮಜೀದ್‌ರ ಅಂಗಡಿಗೆ ತಲುಪಿದ್ದಾರೆನ್ನಲಾಗಿದೆ.
ಟಯರ್‌ಗೆ ಗಾಳಿ ತುಂಬಿಸಿ ತೆರಳಿದ್ದು ಅನಂತರವೂ ಟಯರ್‌ನಿಂದ ಗಾಳಿ ಸೋರಿಕೆಯಾಗಿತ್ತೆನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಅವರಿಬ್ಬರೊಳಗೆ ವಾಗ್ವಾದ, ಹೊಡೆದಾಟ ನಡೆದಿದೆ. ಹೊಡೆದಾಟದಲ್ಲಿ ಮೂಸರ ಒಂದು ಹಲ್ಲು ಉದುರಿದೆಯೆಂದೂ ದೂರಲಾಗಿದೆ.