ಮಗುವಿನ ಜೀವಕ್ಕಾಗಿ ಉದಾರ ದಾನಿಗಳ ಮುಂದೆ ಕೈ ಚಾಚಿದ ಕುಟುಂಬ
ಕುಂಬಳೆ: ಈಕೆ ವೈಗಾ. ಪ್ರಾಯ ಒಂದು ವರ್ಷ. ಪುಟ್ಟ ಕಾಲುಗಳನ್ನು ಎತ್ತಿ ಇಟ್ಟು ನಡೆಯಬೇಕಾಗಿದ್ದ ಈ ಬಾಲೆ ಈಗಲೂ ಮಲಗಿದಲ್ಲೇ ಇದ್ದಾಳೆ. ಕಣ್ಣಿನ ದೃಷ್ಟಿ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ. ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವಿನ ಜೀವ ಉಳಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಕೂಲಿ ಕಾರ್ಮಿಕರಾಗಿರುವ ವೈಗಾಳ ತಂದೆ ತಾಯಿಯರ ಆದಾಯದಿಂದ ಈ ಆಪರೇಶನ್ ನಡೆಸಲು ಅಸಾಧ್ಯವಾಗಿದೆ. ಈ ಮಧ್ಯೆ ತಂದೆ ಸೆಂಟ್ರಿಂಗ್ ಕೆಲಸ ವೇಳೆ ಬಿದ್ದು ಕಾಲಿಗೆ ಗಾಯ ಉಂಟಾಗಿದ್ದು, ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ಕುಂಬಳೆ, ಬಂಬ್ರಾಣ ತಿಲಕನಗರದ ರಮೇಶ್- ಶ್ರುತಿ ದಂಪತಿಯ ಪುತ್ರಿಯಾದ ವೈಗಾ ಜನ್ಮತಾ ಅನಾರೋಗ್ಯದಿಂದಿದ್ದಾಳೆ. ಆದರೆ ಇದು ಕ್ರಮೇಣ ಸರಿಯಾಗಬಹುದೆಂದು ಹೆತ್ತವರು ನಿರೀಕ್ಷೆ ಇರಿಸಿದ್ದರು. ಬಳಿಕ ಅಲ್ಲಿ ಇಲ್ಲಿ ಎಲ್ಲಾ ಕಡೆ ಕೊಂಡು ಹೋಗಿ ಚಿಕಿತ್ಸೆ ನಡೆಸಿದರು. ಇದ್ದ ಹಣ ಮತ್ತು ಸಾಲ ಮಾಡಿ ಇದಕ್ಕಾಗಿ ವೆಚ್ಚ ಮಾಡಿದರು. ಈಗಾಗಲೇ ಸುಮಾರು ೨ ಲಕ್ಷ ರೂ. ಮಿಕ್ಕೂ ಚಿಕಿತ್ಸೆಗಾಗಿ ಕುಟುಂಬ ವೆಚ್ಚ ಮಾಡಿದೆ. ಆದರೂ ಯಾವುದೇ ಚೇತರಿಕೆ ಉಂಟಾಗಲಿಲ್ಲ.
ಮೆದುಳಿನಲ್ಲಿರುವ ಸಮಸ್ಯೆ ವೈಗಾಳ ಈ ದೈಹಿಕ ಅಸ್ವಸ್ಥತೆಗೆ ಕಾರಣವೆಂದು ವೈದ್ಯರುಗಳು ತಿಳಿಸಿದ್ದಾರೆ. ಅದಕ್ಕೆ ಶಸ್ತ್ರಚಿಕಿತ್ಸೆ ಮಾತ್ರವೇ ದಾರಿಯೆಂದೂ ಹೇಳಿದ್ದಾರೆ. ಆದರೆ ಅದಕ್ಕೆ ಬೃಹತ್ ಮೊತ್ತವೂ ಅಗತ್ಯವಿದೆ. ಈ ಮೊತ್ತ ಸಂಗ್ರಹ ಹೇಗೆ ಎಂದೇ ಕುಟುಂಬ ಚಿಂತಿಸಿ ಕಣ್ಣೀರಿಡುತ್ತಿದೆ.
ಉದಾರ ದಾನಿಗಳು ಕಣ್ಣು ಮನಸ್ಸು ತೆರೆದು ಸಹಾಯ ನೀಡಿದರೆ ಈ ಮಗುವಿನ ಜೀವ ಉಳಿಸಬಹುದೆಂದು ಕುಟುಂಬ ನಿರೀಕ್ಷೆ ಇರಿಸಿದ್ದು, ಅದಕ್ಕಾಗಿ ಕುಂಬಳೆ ಕೇರಳ ಗ್ರಾಮೀಣ ಬ್ಯಾಂಕ್ನಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ. 40517101011030 ನಂಬ್ರದ ಖಾತೆಗೆ (ಐಎಫ್ಎಸ್ಸಿ ಕೋಡ್- ಕೆ.ಎಲ್.ಜಿ.ಬಿ 0040517) ಸಹಾಯ ಪಾವತಿಸಬಹುದೆಂದು ಕುಟುಂಬ ವಿನಂತಿಸಿದೆ. ದೂರವಾಣಿ: 9633989714