ಕೇರಳದಲ್ಲಿ ಬಿಜೆಪಿ ಗೆಲುವು ಖಚಿತ- ನರೇಂದ್ರ ಮೋದಿ
ಪತ್ತನಂತಿಟ್ಟ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ನುಡಿದಿದ್ದಾರೆ. ಪತ್ತನಂತಿಟ್ಟದ ಬಿಜೆಪಿ ಅಭ್ಯರ್ಥಿ ಅನಿಲ್ ಆಂಟನಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಅನಿಲ್ ಆಂಟನಿಯವರಂತಹ ಯುವ ನೇತಾರರು ಕೇರಳಕ್ಕೆ ಬೇಕಾಗಿದ್ದಾರೆ. ಇಲ್ಲಿಂದ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೇರಳದ ಅಭಿವೃದ್ಧಿ ಸಾಧ್ಯ ಎಂದೂ ಪ್ರಧಾನಮಂತ್ರಿ ನುಡಿದರು.
ರಾಜ್ಯದ ಆಡಳಿತ ಹಾಗೂ ಎಡ-ಐಕ್ಯರಂಗ ಗಳನ್ನು ನರೇಂದ್ರ ಮೋದಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕೇರಳ ಸರಕಾರದ ದುರಾಡಳಿತದಿಂದ ಅಭಿವೃದ್ಧಿ ಇಲ್ಲದಂತಾಗಿದೆ. ಕಾಲೇಜುಗಳು ಕಮ್ಯೂನಿಸ್ಟ್ ಗೂಂಡಾಗಳ ಬಿಡಾರವಾಗಿ ಮಾರ್ಪಟ್ಟಿದೆ ಎಂದೂ ಅವರು ಆರೋಪಿಸಿದರು. ರಬ್ಬರ್ ಕೃಷಿಕರೂ ಸಂಕಷ್ಟ ಎದುರಿಸುತ್ತಿದ್ದಾರೆ. ಅದಕ್ಕೆ ಪರಿಹಾರವಾಗಬೇಕಾದರೆ ಕೇರಳದಲ್ಲಿ ಎಲ್‌ಡಿಎಫ್, ಯುಡಿಎಫ್ ಆಡಳಿತ ಇಲ್ಲದಾಗಬೇಕೆಂದೂ ಮೋದಿ ತಿಳಿಸಿದರು.
ನಿನ್ನೆ ಅಪರಾಹ್ನ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡ ಪದ್ಮಜಾ ವೇಣುಗೋಪಾಲರ ಉಪಸ್ಥಿತಿ ಗಮನಾರ್ಹವಾಗಿತ್ತು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ, ಎನ್‌ಡಿಎ ಅಭ್ಯರ್ಥಿಗಳಾದ ಅನಿಲ್ ಆಂಟನಿ, ವಿ. ಮುರಳೀಧರನ್, ಶೋಭಾ ಸುರೇಂದ್ರನ್, ಬೈಜು ಕಲಾಶಾಲ ಮೊದಲಾದವರು ಉಪಸ್ಥಿತರಿದ್ದರು.