ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಗಲ್ಫ್ ಉದ್ಯೋಗಿ ಮೃತ್ಯು
ಕಾಸರಗೋಡು: ಮಾರ್ಚ್ ೨೧ರಂದು ಕಾಸರಗೋಡು ರೈಲು ನಿಲ್ದಾಣದ ಪ್ಲಾಟ್ ಫಾಂನಲ್ಲಿ ರೈಲಿನಿಂದ ಇಳಿಯುತ್ತಿದ್ದ ವೇಳೆ ಬಿದ್ದು ಗಂಭೀರ ಗಾಯಗೊಂಡ ಗಲ್ಫ್ ಉದ್ಯೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈಗ ಮಂಗಳೂರು ಬಲ್ಮಠದಲ್ಲಿ ಕುಟುಂಬ ಸಮೇತ ವಾಸಿಸುತ್ತಿರುವ ಮೂಲತಃ ಚೆಮ್ನಾಡ್ ನಿವಾಸಿ ಮೊಹಮ್ಮದ್ ಬಶೀರ್ ತುರ್ತಿ (೬೩) ಸಾವನ್ನಪ್ಪಿದ ವ್ಯಕ್ತಿ. ಇವರು ಚೆಮ್ನಾಡಿನ ಅಬ್ದುಲ್ ಖಾದರ್- ಹಾಜಿರಾ ದಂಪತಿ ಪುತ್ರನಾಗಿದ್ದಾರೆ.
ಬಶೀರ್ರ ತಂದೆ ಅಬ್ದುಲ್ ಖಾದರ್ ಒಂದು ವಾರದ ಹಿಂದೆ ನಿಧನ ಹೊಂದಿದ್ದರು. ಆ ವಿಷಯ ತಿಳಿದ ಬಶೀರ್ ಚೆಮ್ನಾಡಿಗೆ ಬಂದು ಬಳಿಕ ಅಲ್ಲಿಂದ ಮಂಗಳೂರಿಗೆ ಹಿಂತಿರುಗಿದ್ದರು. ಅದಾದ ಎರಡು ದಿನಗಳ ಬಳಿಕ ಅವರು ಮತ್ತೆ ತಂದೆ ಮನೆಗೆ ಬರಲೆಂದು ಬೆಂಗಳೂರು- ಕಣ್ಣೂರು ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಆ ವೇಳೆ ಅವರ ಕಾಲು ಕತ್ತರಿಸಲ್ಪಟ್ಟಿತ್ತು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಸುಲೈಖಾ ಮತ್ತು ನಾಲ್ವರು ಹೆಣ್ಣುಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.