ಗಾಂಜಾ, ಮಾದಕಮಾತ್ರೆಗಳ ಸಹಿತ ಬಂಬ್ರಾಣ ನಿವಾಸಿ ಸೇರಿ ಇಬ್ಬರ ಸೆರೆ
ಕುಂಬಳೆ: ಕೊಚ್ಚಿಯಲ್ಲಿ ಸ್ಟೇಟ್ ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಮತ್ತು ಎರ್ನಾಕುಳಂ ಟೌನ್ ಪೊಲೀಸರು ನಡೆಸಿದ ಸಾಹಸಿಕ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಗಾಂಜಾ, ಮಾದಕದ್ರವ್ಯವಾದ ಮೆತ್ತಾ ಮತ್ತು ಮಾದಕ ಮಾತ್ರೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಪೌಡರ್ ರೂಪದ ೬೨.೫೭ ಗ್ರಾಂ ವೈಟ್ ಮೆತ್ತಾ, ೩.೩೦೦ ಗ್ರಾಂ ಗಾಂಜಾ, ಮತ್ತು ೧೮ ಮಾದಕಮಾತ್ರೆ ಗಳನ್ನು ಈ ತಂಡ ಪತ್ತೆಹಚ್ಚಿ ವಶಪ ಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಸಮೀಪದ ಬಂಬ್ರಾಣ ಕಿದೂರಿನ ಸಕರಿಯಾ ಮಂಜಿಲ್‌ನ ಸಕರಿಯಾ (೩೨) ಮತ್ತು ಇಡುಕ್ಕಿ ವಲಿಯತೋವಳಿ ಕುಟ್ಟಿಯನತ್ತೆ ವೀಟಿಲ್‌ನ ಅಮಲ್ ವರ್ಗೀಸ್ (೨೬) ಎಂಬವರನ್ನು ಬಂಧಿಸಲಾಗಿದೆ.
ಬಂಧಿತರು ಕೊಚ್ಚಿನಗರದಲ್ಲಿ ಯುವಕ, ಯುವತಿಯರಿಗೆ ಮಾದಕ ದ್ರವ್ಯ ವಿತರಿಸುವ ಜಾಲದ ಪ್ರಧಾನ ಕೊಂಡಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾದಕದ್ರವ್ಯವನ್ನು ತೂಕ ಮಾಡುವ ಯಂತ್ರಗಳು, ಲ್ಯಾಪ್‌ಟಾಪ್, ಎರಡು ಮೊಬೈಲ್ ಫೋನ್‌ಗಳು, ಕವರ್‌ಗಳು, ಬೈಕ್ ಮತ್ತು ೧೬,೫೦೦ ರೂ. ನಗದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸೋಶ್ಯಲ್ ಮೀಡಿಯಾದಲ್ಲಿ ಮಾಡ್ ಮಾರ್ಕ್ ಎಂಬ ಗ್ರೂಪ್ ರಚಿಸಿ ಅದರ ಮೂಲಕ ಮಾದಕದ್ರವ್ಯ ವಿತರಿಸು ವುದು ಈ ಜಾಲದ ರೀತಿಯಾಗಿದೆ. ಬಂಧಿತರಿಬ್ಬರು ಕ್ರಿಮಿನಲ್ ಪ್ರಕರಣದ ಆರೋಪಿಗಳೂ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಇವರು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕೊಚ್ಚಿಯ ವೈಟಿಲ ಚಕ್ಕರೆಪರಂಬು ಸಮೀಪದಲ್ಲಿ ಅತೀವ ಸಾಹಸಿಕ ರೀತಿಯಲ್ಲಿ ಇವರನ್ನು ಸೆರೆಹಿಡಿಯಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.