ಕಾಸರಗೋಡು: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ 25 ಪವನಿನ ಚಿನ್ನದ ಒಡವೆ ಹಾಗೂ 55,000 ರೂ. ನಗದು ಕದ್ದೊ ಯ್ದ ಘಟನೆ ನಡೆದಿದೆ. ಇದು ಮಾತ್ರವಲ್ಲ ಕಳ್ಳರು ಆ ಮನೆಯ ಸಿಸಿ ಟಿವಿಯ ಹಾರ್ಡ್ ಡಿಸ್ಕನ್ನು ಜತೆಗೆ ಒಯ್ದಿದ್ದಾರೆ.
ಗಲ್ಫ್ ಉದ್ಯೋಗಿ ಕಿಯೂರು ನಿವಾಸಿ ಕೆ. ಸುರೇಶ ಎಂಬವರ ಮನೆ ಯಲ್ಲಿ ಈ ಕಳವು ನಡೆದಿದೆ. ಸುರೇಶ್ ಒಂದು ತಿಂಗಳ ಹಿಂದೆಯಷ್ಟೇ ರಜೆ ಯಲ್ಲಿ ಗಲ್ಫ್‌ನಿಂದ ಊರಿಗೆ ಬಂದಿದ್ದರು. ಬಳಿಕ ಕಳೆದ ಶನಿವಾರದಂದು ಮುಂಜಾನೆ ಮನೆಗೆ ಬೀಗ ಜಡಿದು ಪತ್ನಿ ಸುಮಿತ್ರರ ಜತೆ ಅವರು ಗಲ್ಫ್‌ಗೆ ಹಿಂತಿರುಗಿದ್ದರು. ಸುರೇಶ್‌ರ ಮನೆಯ ಹೂದೋಟಗಳಿಗೆ ಖಾಯಂ ಆಗಿ ನೀರು ಹಾಯಿಸುವ ಕಿಯೂರು ಕಡಪ್ಪರ ನಿವಾಸಿ ಸುನಿಲ್ ಅವರು ಸುರೇಶ್‌ರ ಸ್ನೇಹಿತ ಸುಚೀಂದ್ರನ್‌ರ ಜತೆ ನಿನ್ನೆ ಮನೆಗೆ ಬಂದಾಗ ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ಎರಡು ಅಂತಸ್ತಿನ ಮನೆಯ ಕೆಳಗಿನ ಮಹಡಿಯ ಮಲಗುವ ಕೊಠಡಿಯಲ್ಲಿದ್ದ ಕಬ್ಬಿಣ ಮತ್ತು ಮರದ ಕಪಾಟುಗಳನ್ನು ಒಡೆದು ಅದರಲ್ಲಿದ್ದ ನಗನಗದನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಮನೆ ಮಾಲಕ ಸುರೇಶ್‌ರ ಪತ್ನಿಯ ಸಹೋದರಿ ಅಣಿಞ್ಞಿ ಕೊಂಡ್ಯಕಾನದ ಕೆ. ವಸಂತಿ ಬಳಿಕ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದರು. ಒಟ್ಟು 13 ಲಕ್ಷ ರೂ. ಮೌಲ್ಯದ ನಗ-ನಗದು ಮನೆ ಯಿಂದ ಕಳವು ಗೈಯ್ಯಲ್ಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮನೆ ಕಪಾಟಿನ ಸಾಮಗ್ರಿಗಳೆಲ್ಲವನ್ನೂ ಕಳ್ಳರು ಎಳೆದು ಹಾಕಿ ಚೆಲ್ಲಾಪಿಲ್ಲಿಗೊಳಿಸಿದ್ದಾರೆ.
ಸಿಸಿ ಟಿವಿ ಕ್ಯಾಮರಾದ ಹಾರ್ಡ್ ಡಿಸ್ಕನ್ನೂ ಕಳ್ಳರು ಜತೆಗೆ ಸಾಗಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಆರ್. ಅರುಣ್ ಕುಮಾರ್‌ರ ನೇತೃತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಬಳಸಿ ತನಿಖೆ ನಡೆಸಲಾಯಿತು. ಕಳವು ನಡೆದ ವಿಷಯ ತಿಳಿದ ಸುರೇಶ್ ಮತ್ತು ಅವರ ಪತ್ನಿಯೂ ಈಗ ಊರಿಗೆ ಆಗಮಿಸಿದ್ದಾರೆ.