ಪಂಚಾಯತ್ ನೌಕರೆ, ಇಬ್ಬರು ಮಕ್ಕಳು ನಿಗೂಢ ಸಾವು: ಪೊಲೀಸ್ ತನಿಖೆ ತೀವ್ರ
ಕಾಸರಗೋಡು: ಪಂಚಾಯತ್ ನೌಕರೆಯಾದ ಯುವತಿ ಹಾಗೂ ಇಬ್ಬರು ಮಕ್ಕಳು ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಬ್ರಕಾನ ನಿವಾಸಿಯೂ ಕೆಎಸ್ಇಬಿ ನೀಲೇಶ್ವರ ಚೊಯ್ಯಂ ಗೋಡು ಸೆಕ್ಷನ್ ಕಚೇರಿಯ ಸಬ್ ಇಂಜಿನಿಯರ್ ಟಿ.ಎಸ್. ರಂಜಿತ್ ಎಂಬವರ ಪತ್ನಿ, ಪೆರಿಂಗೋ ಪಂಚಾಯತ್ ಕಚೇರಿಯ ನೌಕರೆಯಾದ ಕೆ. ಸಜನ (೩೨), ಗೌತಂ (೯), ತೇಜಸ್ (೬) ಎಂಬಿವರು ಈ ತಿಂಗಳ ೯ರಂದು ಮಧ್ಯಾಹ್ನ ೧೨.೩೦ರ ವೇಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಜನ ಮನೆಯ ಹಿಂಭಾಗದ ಟೆರೇಸ್ಗೆ ನೇಣು ಬಿಗಿದ ಸ್ಥಿತಿಯಲ್ಲಿ, ಮಕ್ಕಳಾದ ಗೌತಂ ಮತ್ತು ತೇಜಸ್ ಮನೆಯ ಎರಡನೇ ಮಹಡಿಯ ಬೆಡ್ರೂಂನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ದಿನದಂದು ಬೆಳಿಗ್ಗೆ ಸಜನ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿದ್ದರು. ರಂಜಿತ್ರ ತಾಯಿ ಸ್ವಂತ ಊರಾದ ಮೂವಾಟುಪುಳಕ್ಕೆ ತೆರಳಿದ್ದರು. ಹಸುಗಳಿಗೆಹುಲ್ಲು ತರಲು ತೆರಳಿದ್ದ ರಂಜಿತ್ರ ತಂದೆ ಶಿವಶಂಕರನ್ ಮರಳಿ ಬಂದು ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಅದನ್ನು ಕಂಡ ಅವರ ಬೊಬ್ಬೆ ಕೇಳಿ ತಲುಪಿದ ನಾಗರಿಕರು ಪರಿಶೀಲಿಸಿ ದಾಗ ಸಜನ ಕೂಡಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮಕ್ಕಳು ಉಸಿರುಗಟ್ಟಿ ಸಾವಿಗೀ ಡಾಗಿದ್ದಾರೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಮಕ್ಕಳನ್ನು ಕೊಲೆಗೈದ ಬಳಿಕ ಸಜನ ನೇಣುಬಿಗಿದು ಆತ್ಮಹತ್ಯೆಗೈದಿರ ಬಹುದೆಂದು ಅಂದಾಜಿಸಲಾಗಿದೆ. ಇನ್ಸ್ಪೆಕ್ಟರ್ ಕೆ. ಸಲೀಂ ನೇತೃತದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಯಂಗವಾಗಿ ಸಜನರ ಮೊಬೈಲ್ ಫೋನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.