ಮಲಪ್ಪುರಂ: ವಿವಾಹ ಭರವಸೆ ನೀಡಿ ಮಹಿಳೆಯರನ್ನು ದೌರ್ಜನ್ಯಗೈದು ಅವರ ಚಿನ್ನಾಭರಣ, ಹಣವನ್ನು ಅಪಹರಿಸುವ ಕೃತ್ಯವನ್ನು ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮಣವಾಳನ್ ರಿಯಾಸ್, ಮುಜೀಬ್ ಎಂಬೀ ಹೆಸರುಗಳಿಂದ ತಿಳಿಯಲ್ಪಡುತ್ತಿರುವ ಮಲಪ್ಪುರಂ ಎಡಪ್ಪಟ್ಟ ನಿವಾಸಿ ಮುಹಮ್ಮದ್ ರಿಯಾಸ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಮಲಪ್ಪುರಂ ನಿವಾಸಿಯಾದ ಮಹಿಳೆಯ ದೂರಿನಂತೆ ಈತ ಈಗ ಸೆರೆಯಾಗಿದ್ದಾನೆ. ವಿಧವೆಯರನ್ನು ಹಾಗೂ ಆಶ್ರಿತರಿಲ್ಲದ ಮಹಿಳೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವಾಹ ಭರವಸೆ ನೀಡಿ ಲೈಂಗಿಕವಾಗಿ ದೌರ್ಜನ್ಯಗೈದು ಬಳಿಕ ಅವರ ಚಿನ್ನಾಭರಣ ಹಾಗೂ ಹಣವನ್ನು ಅಪಹರಿಸುವುದು ಈತನ ರೀತಿಯಾಗಿದೆ. ಹೀಗೆ ಲಭಿಸುವ ಹಣವನ್ನು ಉಪಯೋಗಿಸಿ ಚೆನ್ನೈ, ವಯನಾಡ್ ಎಂಬೆಡೆಗಳಲ್ಲಿ ಆಡಂಭರ ಬದುಕು ಈತ ನಡೆಸುತ್ತಿದ್ದನು. ವಯನಾಡ್ ಪನಮರದಲ್ಲಿರುವ ಪತ್ನಿಯ ಜೊತೆ ರಹಸ್ಯವಾಗಿ ವಾಸಿಸುತ್ತಿದ್ದ ಮಧ್ಯೆ ಪೋತ್‌ಕಲ್ ಪೊಲೀಸರು ಈತನನ್ನು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಜಿಲ್ಲೆಯ ಹೊರತಾಗಿ ಪಾಲಕ್ಕಾಡ್, ಕಲ್ಲಿಕೋಟೆ, ವಯನಾಡ್ ಎಂಬೀ ಜಿಲ್ಲೆಗಳಲ್ಲೂ ಮುಹಮ್ಮದ್ ರಿಯಾಸ್ ತತ್ಸಮಾನವಾದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನು ವಂಚಿಸಿದ ಏಳು ಮಹಿಳೆಯರ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈತನ ಸೆರೆಯ ಸುದ್ಧಿ ಬಹಿರಂಗಗೊಂಡ ಬಳಿಕ ಈತನ ವಿರುದ್ಧ ಇನ್ನಷ್ಟು ಮಹಿಳೆಯರು ದೂರು ಸಹಿತ ತಲುಪುವ ನಿರೀಕ್ಷೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.