ಕುಂಬಳೆ: ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಿಸುವುದರ ವಿರುದ್ಧ ಕ್ರಿಯಾ ಸಮಿತಿಯ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ನಿನ್ನೆ ಸಂಜೆ ಕುಂಬಳೆಯಲ್ಲಿ ಜರಗಿದ ಸರ್ವಪಕ್ಷ ಕ್ರಿಯಾ ಸಮಿತಿಯ ಸಭೆಯಲ್ಲಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಈ ತಿಂಗಳ 19ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜನಪ್ರತಿನಿಧಿಗಳ ಪ್ರತಿಭಟನಾ ಸಂಗಮ ನಡೆಯಲಿದೆ. ಮಂಜೇಶ್ವರ- ಕಾಸರಗೋಡು ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸದಸ್ಯರು, ಕಾಸರಗೋಡು ನಗರಸಭೆಯ ಕೌನ್ಸಿಲರ್ಗಳು ಭಾಗವಹಿಸುವರು. ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಅನ್ಯಾಯವಾಗಿದೆ ಎಂದು, ಇದನ್ನು ತಡೆಯಬೇಕೆಂದು ಆಗ್ರಹಿಸಿ ಕ್ರಿಯಾ ಸಮಿತಿ ನೀಡಿದ ಅರ್ಜಿಯನ್ನು ಹೈಕೋರ್ಟ್ ಈ ತಿಂಗಳ 21ರಂದು ಪರಿಗಣಿಸಲಿದೆ. ಕ್ರಿಯಾ ಸಮಿತಿ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಕುಂಬಳೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರೀಫ್, ಸಿಪಿಎಂ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು, ಯೂಸಫ್ ಉಳುವಾರು, ಇರ್ಷಾದ್ ಮೊಗ್ರಾಲ್, ತಾಜುದ್ದೀನ್ ಮೊಗ್ರಾಲ್ ಮೊದಲಾದವರು ಭಾಗವಹಿಸಿದರು.






