ಮಲೆಯಾಳಂ  ಸಿನಿಮಾಕ್ಕೆ ಹೊಸ ಆಯಾಮ ನೀಡಿದ್ದ ನಟ ಶ್ರೀನಿವಾಸನ್ ನಿಧನ

ಕೊಚ್ಚಿ: ಮಲೆಯಾಳಂ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ಚಿತ್ರರಚನೆ ಗಾರನಾಗಿದ್ದ ಶ್ರೀನಿವಾಸನ್ (69) ನಿಧನ ಹೊಂದಿದರು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಉದಯಂ ಪೇರೂರಿನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಹದಗೆಡತೊಡಗಿದಾಗ ಅವರನ್ನು ತ್ರಿಪುಣ್ಣಿತ್ತರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲ ಕಾರಿಯಾಗದೆ ಇಂದು ಬೆಳಿಗ್ಗೆ ನಿಧನಹೊಂದಿದರು.

1956 ಎಪ್ರಿಲ್ 4ರಂದು ಕೂತುಪರಂಬ ಪಾಟ್ಯದಲ್ಲಿ ಜನಿಸಿದ ಶ್ರೀನಿವಾಸನ್ ಶಾಲಾ ಶಿಕ್ಷಣದ ಬಳಿಕ ಮದ್ರಾಸ್ ಇನ್‌ಸ್ಟಿಟ್ಯೂಟ್ ಗೆ  ಸೇರಿದರು. ಸೂಪರ್ ಸ್ಟಾರ್ ರಜನೀಕಾಂತ್‌ರ ಸಹಪಾಠಿಯೂ ಆಗಿದ್ದರು. 1976ರಲ್ಲಿ ಪಿ.ಎ. ಬಕ್ಕರ್ ನಿರ್ದೇಶಿಸಿದ್ದ ಮಣಿ ಮುಳಕ್ಕಂ ಎಂಬ ಸಿನಿಮಾದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು. ಓರ್ವ ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಕೂಡಾ ಆಗಿರುವ ಶ್ರೀನಿವಾಸನ್ ನಿರ್ದೇಶಕ ಹಾಗೂ  ಚಿತ್ರರಚನೆಗಾರರಾಗಿ ತನ್ನ ಪ್ರತಿಭೆ ಮೆರೆದಿದ್ದರು. ಮಲೆಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ ಅವರು ಅಭಿನಯಿಸಿದ್ದ ನಾಡೋಡಿಕಾಟ್, ಪಟ್ಟಣಂ ಪ್ರವೇಶಂ, ಅಕ್ಕರೆ ಅಕ್ಕರೆ ಅಕ್ಕರೆ, ವರವೇಲ್ಪು, ಮಿಥುನಂ, ಉದಯನಾಣ್‌ತಾರಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೋಹನ್‌ಲಾಲ್‌ರ ಜತೆಗೆ ಅಭಿನಯಿಸಿದ್ದು  ಆ ಎಲ್ಲಾ ಚಿತ್ರಗಳು ಗಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿತ್ತು.

ಅತ್ಯುತ್ತಮ ಕಥೆ  ಸಂದೇಶ , ಅತ್ಯುತ್ತಮ ಚಿತ್ರಕಥೆ  ಮಳೆಯೆತ್ತುಂ ಮುಂಬೆ,  ಅತ್ಯುತ್ತಮ ಜನಪ್ರಿಯ ಚಿತ್ರ  ಚಿಂತಾವಿಷ್ಟೆಯಾಯ   ಶ್ಯಾಮಲ, ಅತ್ಯುತ್ತಮ ಚಿತ್ರ  ವಡಕ್ ನೋಕಿ ಯಂತ್ರಂ, ಪ್ರತ್ಯೇಕ ಜ್ಯೂರಿ ಪುರಸ್ಕಾರ  ತಗರಚೆಂಡ್ ಎಂಬೀ ವಿಭಾಗಗಳಲ್ಲಾಗಿ ರಾಜ್ಯ ಚಲನಚಿತ್ರ ಪುರಸ್ಕಾರಕ್ಕೂ ಅವರು  ಅರ್ಹರಾಗಿದ್ದರು. ಅವರು ಮೊದಲು ನಿರ್ದೇಶಿಸಿದ್ದ ಚಿತ್ರಕ್ಕೂ ರಾಜ್ಯ ಪುರಸ್ಕಾರ ಲಭಿಸಿತ್ತು.

ಶ್ರೀನಿವಾಸನ್‌ರ ನಿಧನಕ್ಕೆ ಮಲೆಯಾಳಂ ಸಿನಿಮಾ ಲೋಕವೇ ಕಣ್ಣೀರು ಮಿಡಿದಿದೆ. ಅಂತ್ಯ ಸಂಸ್ಕಾರ ಅವರ ಹುಟ್ಟೂರಲ್ಲಿ ನಡೆಯಲಿ ದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಮೃತರು ಪತ್ನಿ ವಿಮಲಾ, ಮಕ್ಕಳಾದ ವಿನೀತ್ ಶ್ರೀನಿವಾಸನ್, ಧ್ಯಾನ್ ಶ್ರೀನಿವಾಸನ್ (ಇಬ್ಬರೂ  ಸಿನಿಮಾ ನಟರು) ಸೇರಿದಂತೆ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page