ಕಾಬೂಲ್: ಕದನ ವಿರಾಮ ಉಲ್ಲಂಘಿಸಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಅದರಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟ್ ಆಟಗಾರರು ಸೇರಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ.
ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಅರ್ಗುನ್ ಮತ್ತು ಬರ್ಮಲ್ ಜಿಲ್ಲೆಗಳಲ್ಲಿ ಪಾಕಿಸ್ತಾನ ಈ ವೈಮಾನಿಕ ದಾಳಿ ನಡೆಸಿದೆ. ಈ ದಾಳಿ ನಮ್ಮ ಮೂವರು ಆಟಗಾರರು ಸೇರಿದಂತೆ 12 ಮಂದಿಯ ಪ್ರಾಣ ಅಪಹರಿಸಿದೆ. ಇದು ಹೇಡಿತನದ ದಾಳಿಯಾಗಿದೆ. ವೀರ ಕ್ರಿಕೆಟಿಗರ ಸಾವು ನಮಗೆ ಅಪಾರ ನೋವು ಉಂಟುಮಾಡಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆ ನೀಡಿದೆ ಮಾತ್ರವಲ್ಲದೆ ಮುಂದಿನ ತಿಂಗಳು ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ನಡುವಿನ ತ್ರಿಕೋನ ಟಿ-20 ಸರಣಿಯಿಂದ ಹಿಂದಕ್ಕೆ ಸರಿಯುವ ತೀರ್ಮಾನವನ್ನೂ ಮಂಡಳಿ ಕೈಗೊಂಡಿದೆ. ಕಬೀರ್, ಸಿಬ್ಫುತುಲ್ಲಾ ಮತ್ತು ಹರೂನ್ ಎಂಬವರು ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಫ್ಘಾನಿಸ್ತಾನದ ಕ್ರಿಕೆಟಿಗರಾಗಿದ್ದಾರೆ. ಇವರು ಟಿ-20 ತ್ರಿಕೋನ ಸರಣಿಯಲ್ಲಿ ಅಡುವ ತಯಾರಿಯಲ್ಲಿ ತೊಡಗಿದ್ದರು. ಆ ವೇಳೆಯಲ್ಲೇ ಅವರು ಈ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದು ಅನಾಗರಿಕ ವೈಮಾನಿಕ ದಾಳಿ. ಅದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರಲ್ಲದೆ ತ್ರಿಕೋನ ಸರಣಿಯಿಂದ ಹಿಂದಕ್ಕೆ ಸರಿಯುವ ನಮ್ಮ ಕ್ರಿಕೆಟ್ ಮಂಡಳಿಯ ನಿರ್ಧಾ ರವನ್ನು ಬೆಂಬಲಿಸು ವುದಾಗಿಯೂ ಅವರು ಹೇಳಿದ್ದಾರೆ.
ಅಕ್ಟೋಬರ್ 11ರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಯಲ್ಲಿ ಉದ್ವಿಗ್ನತೆ ಹೆಚ್ಚಾಗತೊಡಗಿದ್ದು ಅತ್ತಿತ್ತ ನಡೆದ ದಾಳಿಯಲ್ಲಿ ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಹಲವಾರು ಮಂದಿ ಸಾವನ್ನಪ್ಪಿ ಅದೆಷ್ಟೋ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಉಭಯ ರಾಷ್ಟ್ರಗಳು ತಾತ್ಕಾಲಿಕ ಕದನ ವಿರಾಮ ಘೋಷಿಸಿತ್ತು. ಈ ಸಂದರ್ಭದಲ್ಲೇ ಅಪಘಾನಿಸ್ತಾನದ ಮೇಲೆ ಪಾಕಿಸ್ತಾನ ಅಪ್ರಚೋದಿತ ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ಗಡಿ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ