ಕಾಸರಗೋಡು: ರಾಜ್ಯದಲ್ಲಿ ಮೆದುಳು ತಿನ್ನುವ ಅಮೀಬಿಕ್ ಮೆದುಳು ಜ್ವರ ವ್ಯಾಪಕವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ಗರಿಷ್ಠ ಜಾಗ್ರತಾ ನಿರ್ದೇಶ ನೀಡಿದೆ. ಇದರಂತೆ ರೋಗ ಪ್ರತಿರೋಧಕ ಚಟುವಟಿಕೆಗಳನ್ನು ಇನ್ನಷ್ಟು ತೀವ್ರಗೊಳಿಸಲು ಜಿಲ್ಲಾ ಆರೋಗ್ಯ ಇಲಾಖೆ ತೀರ್ಮಾನಿಸಿದೆ. ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯ ಬಾವಿಗಳು ಮತ್ತಿತರ ಜಲಸಂಪನ್ಮೂಲಗಳನ್ನು ಕ್ಲೋರಿನೈಟ್ ಗೊಳಪಡಿಸುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ. ಇದರಂತೆ ಈ ತಿಂಗಳ 30, 31ರಂದು ಜಿಲ್ಲೆಯಲ್ಲ್ಲಿ ವ್ಯಾಪಕವಾಗಿ ಕ್ಲೋರಿನೇಶನ್ ನಡೆಸಲಾಗುವುದು. ತೋಡುಗಳು, ಕಟ್ಟಿನಿಂತ ನೀರು, ಕೆರೆಗಳು ಮೊದಲಾದ ಕಡೆಗಳಲ್ಲಿ ಸ್ನಾನ ಮಾಡಿದಲ್ಲಿ ಈ ಜ್ವರ ತಗಲುತ್ತದೆ. ಬಾವಿ ನೀರೂ ಇದಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಜನರು ಆ ಬಗ್ಗೆ ಗರಿಷ್ಠ ಜಾಗ್ರತೆ ಪಾಲಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯ ಆರೋಗ್ಯ ಇಲಾಖೆ ನಿನ್ನೆ ಪ್ರಕಟಿಸಿದ ಹೊಸ ವರದಿಯಲ್ಲಿ ರಾಜ್ಯದಲ್ಲಿ ಮತ್ತೆ 24 ಮಂದಿಯಲ್ಲಿ ಮೆದುಳು ಜ್ವರ ಪತ್ತೆಹಚ್ಚಲಾಗಿದೆ. ಒಟ್ಟು 71 ಮಂದಿ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅಮೀಬಿಕ್ ಮೆದುಳು ಜ್ವರಕ್ಕೆ ಈ ವರ್ಷ ರಾಜ್ಯದಲ್ಲಿ ಒಟ್ಟಾರೆಯಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ರೋಗದ ಮೂಲವನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅದು ಆರೋಗ್ಯ ಇಲಾಖೆಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸತೊಡಗಿದೆ.
