ತಿರುವನಂತಪುರ: ಬಹುಭಾಷೆ ಯಿಂದ ಕೂಡಿದ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆ ಕಾಸರಗೋಡು. ಅಲ್ಲಿಂದ ಬಂದು ರಾಜಧಾನಿಯಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಶ್ಲಾಘನೀಯ. ಮನುಷ್ಯ ಜಾತಿಯಲ್ಲಿರುವ ನಾವೆಲ್ಲ ಒಂದೇ ಎಂಬ ಭಾವನೆ ಎಲ್ಲರಲ್ಲಿರ ಬೇಕು. ಸಂಪೂರ್ಣ ಸಾಕ್ಷರತೆಯನ್ನು ಹೊಂದಿದ ರಾಜ್ಯದಲ್ಲಿ ಇಂದು 105 ವರ್ಷದ ವ್ಯಕ್ತಿಯೂ ಆಧುನಿಕ ಕಾಲಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ನುಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸೃ ್ಕತಿ ಉತ್ಸವವನ್ನು ತಿರುವನಂತರಪುರ ಸಿವಿ ರಾಮನ್ ಪಿಳ್ಳೆ ರಸ್ತೆ ತೈಕಾಡ್ ಭಾರತ್ ಭವನದಲ್ಲಿ ದೀಪಬೆಳಗಿಸಿ ಉದ್ಘಾಟಿಸಿ, ಅವರು ಮಾತನಾಡಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸಾಧಕರನ್ನು ಗೌರವಿಸಿ, ಮಾತನಾಡಿ ಧರ್ಮ ಬೆಳಕಾದರೆ ನಾಡಿಗೂ ವಿಶ್ವಕ್ಕೂ ಬೆಳಕನ್ನು ನೀಡಲಿದೆ. ತೌಳವ ಸಂಸ್ಕೃತಿಯಲ್ಲಿ ಆರಾಧಿಸಿಕೊಂಡು ಬರುತ್ತಿರುವ ಅನಂತನ ಪದ್ಮನಾಭನ ಮಣ್ಣಿನಲ್ಲಿ ಕನ್ನಡಕ್ಕೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಅನಂತಪುರಿಯಲ್ಲಿ ಕನ್ನಡದ ಧ್ವನಿ ಹೊರಡುತ್ತಿದೆ. ಭಾಷೆಗಳ ಸಂಸ್ಕೃತಿಗೆ ಗಡಿ ಎಂಬುದಿಲ್ಲ. ಮಾತೃ ಸಂಸ್ಕೃತಿಯೇ ನಮ್ಮ ಬದುಕು ಎಂದು ನುಡಿದರು.
ಕರ್ನಾಟಕ ಸರಕಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವೈಕ್ಯದ ನಾಡಿನಲ್ಲಿ ನಾವಿದ್ದೇವೆ. ಇತಿಹಾಸವನ್ನು ಓದಿದವರಿಗೆ ಮಾತ್ರ ಇತಿಹಾಸವನ್ನು ಬರೆಯಲು ಸಾಧ್ಯವಿದೆ. ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಉದ್ದೇಶ ಕಾರ್ಯಕ್ರಮದ ಹಿಂದೆ ಇದೆ. ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಧಿಕಾರವು ಮುಂದುವರಿಯುತ್ತಿದೆ. ಶಾಲೆಗಳಿಗೆ ಕನ್ನಡ ದಿನಪತ್ರಿಕೆ, ಪುಸ್ತಕ ಗಳನ್ನು ವಿತರಿಸಲು ಯೋಜನೆಯಿದೆ ಎಂದರು.