ಕಾಸರಗೋಡು:ಪೆರಿಯ ಮೂನಾಂ ಕಡವ್ ಏರುರಸ್ತೆಯಲ್ಲಿ ಮತ್ತೆ ಅಪಘಾತ ಸಂಭವಿಸಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ ಅಪಘಾತ ಉಂಟಾಗಿದ್ದು, ಸುಳ್ಯದಿಂದ ನೀಲೇಶ್ವರಕ್ಕೆ ನೇಂದ್ರ ಬಾಳೆಕಾಯಿಯನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವ್ಯಾನ್ ಅಪಘಾತಕ್ಕೀಡಾಗಿದೆ. ಏರು ರಸ್ತೆಯಲ್ಲಿ ಹಿಂದೆ ಚಲಿಸಿದ ಪಿಕಪ್ ರಸ್ತೆ ಬದಿಯ ಎಚ್‌ಟಿ ಲೈನ್ ಕಂಬಕ್ಕೆ ಗುದ್ದಿ ನಿಂತಿದೆ. ವಿದ್ಯುತ್ ಕಂಬ ಹಾನಿಗೊಂಡಿದೆ. ಕಂಬಕ್ಕೆ ಢಿಕ್ಕಿ ಹೊಡೆದು ಪಿಕಪ್ ನಿಲ್ಲದಿರುತ್ತಿದ್ದರೆ ಸಮೀಪದಲ್ಲಿ ಇರುವ ಆಳದ ಹೊಂಡಕ್ಕೆ ಬೀಳಬಹು ದಾಗಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ವೇಳೆ ಹಿಂಬದಿಯಿಂದ ಯಾವುದೇ ವಾಹನ ಇಲ್ಲದಿರುವುದು ದೊಡ್ಡ ದುರಂತವನ್ನು ತಪ್ಪಿಸಿದೆ. ಈ ಮೊದಲೇ ಹಲವಾರು ಅಪಘಾತಗಳು ಸಂಭವಿಸಿದ ಸ್ಥಳದಲ್ಲಾಗಿದೆ ಇಂದು ಬೆಳಿಗ್ಗೆ ಮತ್ತೆ ಅಪಘಾತ ಸಂಭವಿಸಿರು ವುದು. ಸ್ಥಳೀಯರು ನಡೆಸಿದ ಹೋರಾಟಗಳಿಗೆ ಪರಿಹಾರ ಕಾಣದಿರುವುದೇ ಇಲ್ಲಿ ಸತತ ಅಪಘಾತವುಂಟಾಗಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಕಾಞಂಗಾಡ್- ಸುಳ್ಯ ಅಂತಾರಾಜ್ಯ ರೂಟ್‌ನಲ್ಲಿ ಇತ್ತೀಚೆಗೆ ಮೂನಾಂ ಕಡವ್ ಮೂಲಕ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿದೆ. ಕುಂಡಂಕುಳಿಯಿಂದ ಪೆರಿಯ ರಾಷ್ಟ್ರೀಯ ಹೆದ್ದಾರಿಗೆ ತಲುಪಲಿರುವ ಸುಲಭ ದಾರಿಯಾದ ಕಾರಣ ನೂರಾರು ವಾಹನಗಳು ಮೂನಾಂಕಡವ್ ಮೂಲಕ ದಿನಂಪ್ರತಿ ಸಂಚರಿಸುತ್ತಿವೆ.
