ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್‌ನ ಮೇಲೆ ವ್ಯಾಪಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದ ವಿದ್ಯಾರ್ಥಿ ನಾಯಕ ಹಾಗೂ ಭಾರತ ವಿರೋಧಿಯೂ ಆಗಿರುವ ಉಸ್ಮಾನ್ ಹಾದಿ ಅಪರಿಚಿತ ಮುಸುಕುದಾರಿಗಳ ಗುಂಡೇಟಿಗೆ ಬಲಿಯಾಗಿದ್ದು, ಅದು ಬಾಂಗ್ಲಾದಲ್ಲಿ ಯಾವುದೇ ರೀತಿಯ ನಿಯಂತ್ರಣಕ್ಕೂ ಸಿಗದ ರೀತಿಯ ಹಿಂಸಾಚಾರ ಭುಗಿಲೇಳುವಂತೆ ಮಾಡಿದೆ. ಇದರ ಮರೆಯಲ್ಲಿ ಮತೀಯ ಮೂಲಭೂತವಾದಿಗಳ ಗುಂಪು ವ್ಯಾಪಕವಾಗಿ ಹಿಂಸಾಚಾರದಲ್ಲಿ ತೊಡಗಿದ್ದು ಎಲ್ಲೆಡೆಗಳಲ್ಲಿ ಬೆಂಕಿ ಹಚ್ಚಿ ಸರ್ವನಾಶಗೊಳಿಸತೊಡಗಿದೆ. ಹವಾಮಿ ಲೀಗ್ ಕಾರ್ಯದರ್ಶಿ ಮಾಜಿ ಶಿಕ್ಷಣ ಸಚಿವ ಮುಹೀಬುಲ್ ಹಸನ್ ಚೌದರಿ ನೌಫಲ್‌ರ ಮನೆಗೂ ಅಕ್ರಮಿಗಳು ಕಿಚ್ಚಿರಿಸಿ ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಸೇನೆಗೂ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ರೀತಿಯ ಸ್ಥಿತಿ ನಿರ್ಮಾಣವಾಗಿದೆ.
ಬಾಂಗ್ಲಾದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತವು ಬಾಂಗ್ಲಾದೇಶದ ಎರಡು ಅರ್ಜಿ ವಿಸಾ ಕೇಂದ್ರಗಳನ್ನು ಮುಚ್ಚಿದೆ. ಉಚ್ಛಾಟಿತ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾರಿಗೆ ಭಾರತ ಆಶ್ರಯ ನೀಡಿರುವ ಹಿನ್ನೆಲೆಯಲ್ಲಿ ಅದು ಉಭಯ ದೇಶಗಳ ವಿಪಕ್ಷೀಯ ಸಂಬಂಧಗಳ ಹೆಸರಲ್ಲಿ ಉಂಟಾಗಿರುವ ಅಪಸ್ವರಗಳ ಕಾವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ಭಾರತ ವಿರೋಧಿ ಗುಂಪೊಂದು ಬಾಂಗ್ಲಾ ದೇಶದ ವಿರುದ್ಧ ಭಾರತೀಯ ಸಹಾಯಕ ಹೈ ಕಮಿಶನ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಇದರಿಂದಾಗಿ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಡೆತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶದ ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆ ಕಟ್ಟೆಚ್ಚರ ಪಾಲಿಸತೊಡಗಿದೆ.







