ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಪ್ರಮಾಣದ ಸ್ಪಿರಿಟ್ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತೃಶೂರು ಎಡಕಳಿಯೂರ್ ಪುನ್ನಯೂರ್ ಸೌತ್‌ನ ಅರಕ್‌ಪರಂ ಬಿಲ್ ಹೌಸ್‌ನ ಎ.ಎಚ್. ಅನ್ಸಿಫ್ (40), ಮಂಜೇಶ್ವರ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮೀಪದ ಭೂಮಿಕಾ ನಿಲಯದ ಎ.ಆರ್. ಗಿರೀಶ್ (39) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಎಸ್.ಐ. ಜಿ. ವಿಷ್ಣು ಅವರ ನೇತೃತ್ವದಲ್ಲಿ ಇಂದು ಮುಂಜಾನೆ 1 ಗಂಟೆ ವೇಳೆ ನೀಲೇಶ್ವರ ಮಾರ್ಕೆಟ್ ಜಂಕ್ಷನ್‌ನ ಸಮೀಪದ ಕೋಟಪ್ಪುರಂ ರೋಡ್ ಜಂಕ್ಷನ್‌ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಸ್ಪಿರಿಟ್ ಪತ್ತೆಹಚ್ಚಲಾಗಿದೆ. ಎಸ್.ಐ. ಜಿಷ್ಣು, ಎಸ್.ಐ. ರಾಜೇಶ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಬಿಜು, ಚಾಲಕ ಸುಮೇಶ್ ಎಂಬಿವರು ಚುನಾವಣೆಗೆ ಸಂಬಂಧಿಸಿ ರಾತ್ರಿ ಹೊತ್ತಿನಲ್ಲಿ ಗಸ್ತು ನಡೆಸುತ್ತಿದ್ದರು. ಈ ಮಧ್ಯೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್‌ಭರತ್ ರೆಡ್ಡಿಯವರ ನಿರ್ದೇಶ ಪೊಲೀಸರಿಗೆ ಲಭಿಸಿದೆ. ಇದರಂತೆ ಪೊಲೀಸ್ ತಂಡ ಕೋಟಪ್ಪುರಂ ರೋಡ್ ಜಂಕ್ಷನ್‌ಗೆ ಕೂಡಲೇ ತಲುಪಿದೆ. ಈ ವೇಳೆ ಅಪರಿಮಿತ ವೇಗದಲ್ಲಿ ಬಂದ ಇನ್ನೋವಾ ಕಾರನ್ನು ಪೊಲೀಸರು ತಮ್ಮ ವಾಹನವನ್ನು ರಸ್ತೆಗೆ ಅಡ್ಡವಿರಿಸಿ ತಡೆದು ನಿಲ್ಲಿಸಿದ್ದಾರೆ. ಕಾರನ್ನು ತಪಾಸಣೆ ನಡೆಸಿದಾಗ ಸ್ಪಿರಿಟ್ ಪತ್ತೆಯಾಗಿದೆ. ಕಾರಿನ ಸೀಟ್‌ಗಳನ್ನು ಕಳಚಿ ತೆಗೆದ ಸ್ಥಿತಿಯಲ್ಲಿತ್ತು. 35 ಲೀಟರ್‌ನ 34 ಕ್ಯಾನ್‌ಗಳಲ್ಲಾಗಿ ಸ್ಪಿರಿಟ್ ಬಚ್ಚಿಡಲಾಗಿತ್ತು. ಇದರಿಂದ ಕಾರಿನಲ್ಲಿದ್ದವರನ್ನು ಕೂಡಲೇ ಕಸ್ಟಡಿಗೆ ತೆಗೆಯಲಾಗಿದೆ. ಮೂರು ಕಾರುಗಳಲ್ಲಿ ಸ್ಪಿರಿಟ್ ಸಾಗಿಸಲಾಗುತ್ತಿದೆಯೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆದರೆ ಎರಡು ಕಾರುಗಳು ಪೊಲೀಸರ ಕಣ್ಣಿಗೆ ಬೀಳದೆ ಪರಾರಿಯಾಗಿರುವುದಾಗಿ ಸಂಶಯಿಸಲಾಗುತ್ತಿದೆ.







