ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯ ಹಿರಿಯ ಸಹೋದರನನ್ನು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಕ್ರೂರವಾಗಿ ಹಲ್ಲೆಗೈದ ಘಟನೆಯಲ್ಲಿ ಬೇಕಲ ಪೊಲೀಸ್ ಪ್ರಿನ್ಸಿಪಲ್ ಎಸ್‌ಐ ಸಹಿತ ಮೂರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಬೇಕಲ ಪ್ರಿನ್ಸಿಪಲ್ ಎಸ್‌ಐ ಕೆ.ಪಿ. ಶರತ್, ಶೂರನಾಡ್ ಠಾಣೆಯ ಗ್ರೇಡ್ ಎಸ್‌ಐ ಆರ್. ಶ್ರೀಕುಮಾರ್, ಶಾಸ್ತಾಂಕೋಟ ಠಾಣೆಯ ಸಿಪಿಒ ವಿಪಿನ್ ಕುಮಾರ್ ಎಂಬಿವರನ್ನು ತನಿಖಾನ್ವಯ ಅಮಾನತು ಮಾಡಲಾಗಿದೆ.
ಕಳೆದ ಮೇ 29ರಂದು ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿದೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಕಿರಿಯ ಸಹೋದರನನ್ನು ಹುಡುಕಾಡಿ ಶಾಸ್ತಾಂಕೋಟ ಠಾಣೆಯ ಪೊಲೀಸರು ಅಡೂರಿಗೆ ತಲುಪಿದ್ದರು. ಸಹೋದರನನ್ನು ಪತ್ತೆಹಚ್ಚಲೆಂಬ ಹೆಸರಲ್ಲಿ ಹಿರಿಯ ಸಹೋದರನನ್ನು ಖಾಸಗಿ ವಾಹನದಲ್ಲಿ ಹತ್ತಿಸಿಕೊಂಡು ತೆರಳಿದ್ದಾರೆ. ಹಲವು ಸ್ಥಳಗಳಿಗಿರುವ ಪ್ರಯಾಣದ ಮಧ್ಯೆ ಗುಪ್ತಾಂಗ ಸಹಿತ ಹಲ್ಲೆಗೈದು ಹಾನಿಗೊಳಿಸಿರುವುದಾಗಿ ದೂರಲಾಗಿದೆ. ತನಿಖೆಯಲ್ಲಿ ಪೊಲೀಸರ ಲೋಪವನ್ನು ಪತ್ತೆಹಚ್ಚಲಾಗಿದೆ. ಪೊಲೀಸರ ವಿರುದ್ಧ ಕ್ರಮ ಶಿಫಾರಸು ಮಾಡಿದ ಪತ್ತನಂತಿಟ್ಟ ಎಸ್‌ಪಿ ಐಜಿಗೆ ವರದಿ ನೀಡಿದ್ದರು. ಈ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.






