ಕಾಸರಗೋಡು: ಉಳಿಯತ್ತಡ್ಕದಲ್ಲಿ ಮಧೂರು ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗ ಗಲಭೆ ಸೃಷ್ಟಿಸಲೆತ್ನಿಸಿದ ಆರೋಪದಂತೆ ಕಂಡರೆ ಗುರುತುಪತ್ತೆ ಹಚ್ಚಲಾಗುವ 50ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಂತೆ ಕೋಮು ಘರ್ಷಣೆಗೆ ಯತ್ನಿಸಿದ ಸೆಕ್ಷನ್ ಪ್ರಕಾರ ಕೇಸು ದಾಖಲಿಸಲಾಗಿದೆ.
ಮಧೂರು ಪಂಚಾಯತ್ ಕಚೇರಿ ಪರಿಸರದಲ್ಲಿ ನಿನ್ನೆ ಮಧ್ಯಾಹ್ನ ಶುಚಿತ್ವ ಮಿಶನ್ ಅಭಿಯಾನ ನಡೆಸಲಾಗಿತ್ತು. ಅದರಲ್ಲಿ ಧ್ವನಿವರ್ಧಕ ಬಳಸಿ ಶುಚಿತ್ವ ಕಾಪಾಡುವ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿತ್ತು. ಈ ವೇಳೆ ಒಂದು ತಂಡ ಅಲ್ಲಿಗೆ ಆಗಮಿಸಿ ಇದು ಬಿಜೆಪಿ ಕಾರ್ಯಕ್ರಮವಾಗಿದೆಯೆಂದು ಭಾವಿಸಿ ಕಾರ್ಯಕ್ರಮಕ್ಕೆ ಅಡಚಣೆ ಸೃಷ್ಟಿಸಲೆತ್ನಿಸಿದೆ. ಈ ವೇಳೆ ಅಲ್ಲಿ ನೂಕುನುಗ್ಗಲು ಉಂಟಾಗಿದೆ. ಕೂಡಲೇ ಪೊಲೀಸರು ಮಧ್ಯೆ ಪ್ರವೇಶಿಸಿ ಘರ್ಷಣೆ ಸಾಧ್ಯತೆಯ ವಾತಾವರಣವನ್ನು ತಪ್ಪಿಸಿದರು. ನಂತರ ಆ ಬಗ್ಗೆ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡ ಪೊಲೀಸರು ಹಲವರನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸತೊಡಗಿದ್ದಾರೆ.






