ಹೊಸದುರ್ಗ: ಹೊಸ ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪುದುಕೈ ಅಡ್ಕತ್‌ಪರಂಬ್‌ನಲ್ಲಿ ಯುವಕನನ್ನು ಮನೆಯಿಂದ ಹೊರ ಕರೆದು ಇರಿದು ಕೊಲ್ಲಲು ಯತ್ನ ನಡೆದಿದೆ. ಅಡ್ಕತ್ತಪರಂಬ ಕುಳಿಕುಂಡ್ ಹೌಸ್‌ನ ಕೆ. ಅಭಿಲಾಷ್ (41) ಗಾಯಗೊಂಡವರು. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ನರಿಕ್ಕಾಟ್ ಅರ್ಜುನ್, ಅನೂಪ್, ಕಾವಡಿ ಅಭಿ, ವಿಷ್ಣು ಎಂಬಿವರ ವಿರುದ್ಧ ಹೊಸದುರ್ಗ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿದ್ದಾರೆ. ನಿನ್ನೆ ಅಪರಾಹ್ನ 2 ಗಂಟೆಗೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ವಾಟ್ಸಪ್‌ನಲ್ಲಿ ಅಭಿಲಾಷ್‌ಗೆ ವೀಡಿಯೋ ಕರೆ ಮಾಡಿ ಬದುಕಲು ಬಿಡೆ ಎಂದು ಬೆದರಿಕೆಯೊಡ್ಡಿರುವುದಾಗಿಯೂ ಹೇಳಲಾಗುತ್ತಿದೆ. ಬಳಿಕ 2 ಗಂಟೆ ವೇಳೆಗೆ ಅಭಿಲಾಷ್‌ನ ಮನೆ ಪರಿಸರಕ್ಕೆ ತಲುಪಿದ ಆರೋಪಿಗಳು ಅಭಿಲಾಷ್‌ನನ್ನು ಹೊರಕ್ಕೆ ಕರೆದು ಕತ್ತಿಯಿಂದ ಮೂರು ಬಾರಿ ಇರಿದಿರುವುದಾಗಿ ಹೊಸದುರ್ಗ ಪೊಲೀಸರು ದಾಖಲಿಸಿದ ಕೇಸಿನಲ್ಲಿ ವಿವರಿಸಲಾಗಿದೆ. ಪೂರ್ವದ್ವೇಷವೇ ಆಕ್ರಮಣಕ್ಕೆ ಕಾರಣವೆನ್ನಲಾಗಿದೆ.





