ಕಲ್ಪೆಟ್ಟ: ಮಹಿಳಾ ಅರಣ್ಯಾಧಿಕಾರಿಗೆ ಅದೇ ಇಲಾಖೆಯ ಅಧಿಕಾರಿ ಯೋರ್ವ ಕಿರುಕುಳ ನೀಡಲೆತ್ನಿಸಿದ ಘಟನೆ ನಡೆದಿದೆ. ಸುಗಂಧಗಿರಿ ಸೆಕ್ಷನ್ ಫಾರೆಸ್ಟ್ ಆಫೀಸ್‌ನ ಅಧೀನದಲ್ಲಿರುವ ಮಹಿಳಾ ಅಧಿಕಾರಿ ನೀಡಿದ ದೂರಿನಂತೆ ವೈತ್ತಿರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೂ ದೂರು ನೀಡಲಾಗಿದೆ.
ಕಳೆದ ದಿನ ರಾತ್ರಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಮಹಿಳಾ ಅಧಿಕಾರಿ ರಾತ್ರಿ ಕರ್ತವ್ಯ ದಲ್ಲಿದ್ದ ವೇಳೆ ಸೆಕ್ಷನ್ ಫಾರೆಸ್ಟ್ ಆಫೀಸರ್ ರತೀಶ್ ಕುಮಾರ್ ಎಂಬಾತ ಕೊಠಡಿಗೆ ನುಗ್ಗಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಈ ವೇಳೆ ಬೊಬ್ಬೆ ಹಾಕಿ ಹೊರಗೆ ಓಡಿದುದರಿಂದ ಕಿರುಕುಳದಿಂದ ಪಾರಾಗಿರುವುದಾಗಿ ಮಹಿಳಾ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ವಯನಾಡ್ ಸೌತ್ ಡಿಎಫ್‌ಒ ಅಜಿತ್ ಕೆ. ರಾಮನ್‌ರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ತನಿಖೆಯ ಅಂಗವಾಗಿ ರತೀಶ್ ಕುಮಾರ್‌ನನ್ನು ಕಲ್ಪೆಟ್ಟ ರೇಂಜ್ ಕಚೇರಿಗೆ ವರ್ಗಾಯಿಸಲಾಗಿದೆ.
ಸುಗಂಧಗಿರಿ ಸೆಕ್ಷನ್ ಫಾರೆಸ್ಟ್ ಆಫೀಸ್ ಕಲ್ಪೆಟ್ಟ ರೇಂಜ್‌ನ ಅಧೀನದಲ್ಲಿದೆ. ರತೀಶ್ ಕುಮಾರ್‌ಗೆ ಸುಗಂಧಗಿರಿ ಫಾರೆಸ್ಟ್ ಆಫೀಸ್‌ನ ಹೊಣೆಗಾರಿಕೆ ನೀಡಲಾಗಿತ್ತು. ರಾತ್ರಿ ಹೊತ್ತಿನಲ್ಲಿ ಕರ್ತವ್ಯಕ್ಕೆ ಕನಿಷ್ಠ ಇಬ್ಬರನ್ನು ನೇಮಿಸಬೇಕೆಂಬ ನಿಬಂಧನೆಯಿದೆ. ಆದರೆ ಇನ್ನು ಓರ್ವ ಮಹಿಳಾ ಅಧಿಕಾರಿಯನ್ನು ನೇಮಿಸಲಾಗಿತ್ತೆಂದು ದೂರಲಾಗಿದೆ.