ತಿರುವನಂತಪುರ: ಕೇರಳ ಮಾತ್ರ ವಲ್ಲದೆ ಭಾರತದ ಗಮನ ಸೆಳೆಯಲ್ಪಟ್ಟ ತಿರುವನಂತಪುರ ಕಾರ್ಪೋರೇಶನ್ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ್ ಆಯ್ಕೆಗೊಂಡಿದ್ದಾರೆ.
ತಿರುವನಂತಪುರ ಕಾರ್ಪೋರೇ ಶನ್‌ನ ಕಣ್ಣಾಮೂಲ ವಾರ್ಡ್‌ನಿಂದ ಪಕ್ಷೇತರರಾಗಿ ಗೆದ್ದು ಬಂದ ಪಾಟೂರು ರಾಧಾಕೃಷ್ಣನ್ ಕೂಡಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಆ ಮೂಲಕ ತಿರುವನಂತಪುರ ಕಾರ್ಪೋರೇಶನ್‌ನ ಒಟ್ಟು ೩ ಸದಸ್ಯರ ಬಲದಲ್ಲಿ ಬಿಜೆಪಿ 51 ಸದಸ್ಯರ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ 50 ವಾರ್ಡ್‌ಗಳಲ್ಲಿ ಏಕಾಂಗಿಯಾಗಿ ಗೆದ್ದಿದೆ. ಕೇರಳದ ಕಾರ್ಪೋರೇಶನ್ ಒಂದರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮವಾಗಿದೆ. ಮೇಯರ್ ಆಗಿ ಆಯ್ಕೆಗೊಂಡ ವಿ.ವಿ. ರಾಜೇಶ್ ಮತ್ತು ಉಪಮೇಯರ್ ಅಭ್ಯರ್ಥಿ ಬಿಜೆಪಿಯ ಆಶಾ ನಾಥ್ ಇಬ್ಬರೂ ಬಿಜೆಪಿಯ ಶಕ್ತಿಕೋಟೆಯೆಂದೇ ಕರೆಯಲ್ಪಡುವ ನೇಮಂ ಮತ್ತು ವಟ್ಟಿಯೂರುಕಾವು ವಿಧಾನಸಭಾ ಕ್ಷೇತ್ರಗಳಿಂದ ಗೆದ್ದು ಬಂದ ಕೌನ್ಸಿಲರ್‌ಗಳಾಗಿದ್ದಾರೆ.
ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಗಟ್ಟಲು ಪಕ್ಷೇತರರನ್ನು ಮುಂದಕ್ಕೆ ನಿಲ್ಲಿಸಿ ಅವರಿಗೆ ಎಡರಂಗ ಮತ್ತು ಯುಡಿಎಫ್ ಬೆಂಬಲ ನೀಡುವ ಪ್ರಯತ್ನವೂ ಒಂದೆಡೆ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಆ ಎರಡೂ ಒಕ್ಕೂಟಗಳು ಅಂತಹ ಯತ್ನದಿಂದ ದೂರ ಸರಿದು ತಮ್ಮ ಅಭ್ಯರ್ಥಿಗಳನ್ನು ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಸ್ಪರ್ಧೆಗಿಳಿಸಿತ್ತು.
ಮೇಯರ್ ಸ್ಥಾನಕ್ಕಾಗಿ ಯುಡಿಎಫ್ ತಮ್ಮ ಉಮೇದ್ವಾರನನ್ನಾಗಿ ಮಾಜಿ ಶಾಸಕ ಕೆ.ಎಸ್. ಶಬರೀನಾಥ್‌ರನ್ನು ಸ್ಪರ್ಧೆಗಿಳಿಸಿತ್ತು. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಮೇರಿ ಪುಷ್ಪಾರನ್ನು ಕಣಕ್ಕಿ ಳಿಸಲು ಯುಡಿಎಫ್ ತೀರ್ಮಾನಿಸಿದೆ. ಉಪಮೇಯರ್ ಆಯ್ಕೆ ಇಂದು ಅಪರಾಹ್ನ ನಡೆಯಲಿದೆ. ಸಿಪಿಎಂನ ಆರ್.ಟಿ. ಶಿವಾಜಿಯನ್ನು ಮೇಯರ್ ಸ್ಥಾನಕ್ಕೆ ಸಿಪಿಎಂ ಕಣಕ್ಕಿಳಿಸಿತ್ತು.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ತಿರುವನಂತಪುರ ಜಿಲ್ಲೆಯ ನೇಮಂ ಮತ್ತು ವಟ್ಟಿಯೂರುಕಾವು ಕ್ಷೇತ್ರಗಳಲ್ಲಿ ಹೇಗಾದರೂ ಗೆದ್ದೇ ಸಿದ್ಧವೆಂಬ ತೀವ್ರ ಯತ್ನದಲ್ಲಿ ಬಿಜೆಪಿ ತೊಡಗಿದೆ. ಈ ಪೈಕಿ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನೇತಾರ ಒ. ರಾಜಗೋಪಾಲ್ ಈ ಹಿಂದೆ ಗೆದ್ದಿದ್ದರು.







