ಕಾಸರಗೋಡು: ಗ್ರಾಮ ಪಂಚಾಯತ್‌ಗಳಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಉಪಾಧ್ಯಕ್ಷರ ಆಯ್ಕೆ ಅಪರಾಹ್ನ ನಡೆಯಲಿರುವುದು. ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಆಡಳಿತ ಬಿಜೆಪಿಗೆ ಲಭಿಸಿದೆ. ಇಂದು ಬೆಳಿಗ್ಗೆ ನಡೆದ ಚೀಟಿ ಎತ್ತುವಿಕೆಯಲ್ಲಿ ಅದೃಷ್ಟ ಬಿಜೆಪಿಯ ಪಾಲಾಗಿದೆ. ಇದರಿಂದ ಬಿಜೆಪಿಯ ಡಿ. ಶಂಕರ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಪಂಚಾಯತ್‌ನಲ್ಲಿ ಒಟ್ಟು ೨೧ ವಾರ್ಡ್‌ಗಳಿದ್ದು, ಈ ಪೈಕಿ ಯುಡಿಎಫ್ ಹಾಗೂ ಬಿಜೆಪಿ ತಲಾ 10 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಸಮಾನ ಬಲ ಹೊಂದಿದೆ. ಒಂದು ವಾರ್ಡ್‌ನಲ್ಲಿ ಸಿಪಿಎಂ ಜಯಗಳಿಸಿದೆ. ಇಂದು ಬೆಳಿಗ್ಗೆ ಪಂಚಾಯತ್‌ನಲ್ಲಿ ಅಧ್ಯಕ್ಷರ ಆಯ್ಕೆ ಗಾಗಿ ನಡೆದ ಮತದಾನ ವೇಳೆ ಸಿಪಿಎಂ ಅಭ್ಯರ್ಥಿ ತಟಸ್ಥ ನಿಲುವು ಅನುಸರಿಸಿದ್ದಾರೆ. ಇದರಿಂದ ಮತದಾನದಲ್ಲಿ ಬಿಜೆಪಿಯ ಡಿ. ಶಂಕರ ಅವರಿಗೆ 10 ಮತಗಳು ಹಾಗೂ ಯುಡಿಎಫ್‌ನಿಂದ ಸ್ಪರ್ಧಿಸಿದ ಕಾಂಗ್ರೆಸ್‌ನ ಶ್ಯಾಮ್ ಪ್ರಸಾದ್ ಮಾನ್ಯರಿಗೆ 10 ಮತಗಳು ಲಭಿಸಿದೆ. ಇದರಿಂದ ಬಳಿಕ ಚೀಟಿ ಎತ್ತಿದ್ದು, ಈ ವೇಳೆ ಅದೃಷ್ಟ ಬಿಜೆಪಿ ಪಾಲಾಗಿದೆ. ಹಲವು ವರ್ಷಗಳ ಬಳಿಕ ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿಗೆ ಆಡಳಿತ ಲಭಿಸಿರುವುದು ಪಕ್ಷದ ನೇತಾರರು ಹಾಗೂ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ. ಕಳೆದ ಆಡಳಿತ ಸಮಿತಿಯಲ್ಲಿ ಕೂಡಾ ಬಿಜೆಪಿಗೆ ೮ ಹಾಗೂ ಯುಡಿಎಫ್‌ಗೆ 8 ಸೀಟುಗಳು ಲಭಿಸಿತ್ತು. ಎಲ್‌ಡಿಎಫ್‌ಗೆ ೩ ಸೀಟುಗಳಿದ್ದವು. ಈ ವೇಳೆ ಕೂಡಾ ಮತದಾನದಿಂದ ಎಲ್‌ಡಿಎಫ್‌ನ ಸದಸ್ಯರು ಬಿಟ್ಟು ನಿಂತಿದ್ದರು. ಇದರಿಂದ ನಡೆದ ಚೀಟಿ ಎತ್ತುವಿಕೆಯಲ್ಲಿ ಗೆಲುವು ಯುಡಿಎಫ್‌ಗೆ ಲಭಿಸಿತ್ತು. ಪಕ್ಷ ಅಥವಾ ಒಕ್ಕೂಟಗಳಿಗೆ ಬಹುಮತ ಲಭಿಸಿದ ಪಂಚಾಯತ್‌ಗಳಲ್ಲಿ ನಿರಾತಂಕವಾಗಿ ಅಧ್ಯಕ್ಷರ ಆಯ್ಕೆ ನಡೆದಿರುತ್ತದೆ.







