ವಾಹನ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಮೃತ್ಯು: ಚಿಕಿತ್ಸೆ ಲೋಪ ಆರೋಪಿಸಿ ಆಸ್ಪತ್ರೆ ಮುಂದೆ ಬಿಜೆಪಿ ಪ್ರತಿಭಟನೆ

ಕುಂಬಳೆ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರುವಾಡ್‌ನಲ್ಲಿ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಬಿಜೆಪಿ, ಆರ್‌ಎಸ್‌ಎಸ್  ಕಾರ್ಯಕರ್ತ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಆರಿಕ್ಕಾಡಿ ಪಾರೆಸ್ಥಾನದ  ಕೃಷ್ಣ ಬೆಳ್ಚಪ್ಪಾಡರ ಪುತ್ರ ಎನ್.ಹರೀಶ್ ಕುಮಾರ್ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಾರು ಪ್ರಯಾಣಿಕರಾದ ಮಹಿಳೆ ಹಾಗೂ   ಪುರುಷ ಕೂಡಾ ಗಾಯ ಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತದಿಂದ ಸ್ಕೂಟರ್ ನಜ್ಜುಗು ಜ್ಜಾಗಿದ್ದು, ಕಾರು ಮಗುಚಿಬಿದ್ದಿದೆ. ಸ್ಕೂಟರ್ ಸವಾರನಾದ ಹರೀಶ್ ಕುಮಾರ್ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟಿದ್ದಾರೆ.

ಇದೇ ವೇಳೆ ಸರಿಯಾದ ಚಿಕಿತ್ಸೆ ನೀಡದಿರುವುದೇ ಹರೀಶ್ ಕುಮಾರ್‌ರ ಸಾವಿಗೆ ಕಾರಣವೆಂದು ಆರೋಪಿಸಿ ಆಸ್ಪತ್ರೆ ಮುಂದೆ ಬಿಜೆಪಿ ಕಾರ್ಯ ಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಗೆ ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ರೈ, ಮುರಳೀಧರ ಯಾದವ್, ಪ್ರೇಮಲತಾ, ಸುಧಾಕರ ಕಾಮತ್, ರಮೇಶ್ ಭಟ್, ಸುಜಿತ್ ರೈ  ಮೊದಲಾ ದವರು ನೇತೃತ್ವ ನೀಡಿ ದ್ದಾರೆ. ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಲಿದೆಯೆಂದು ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಕೆ. ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೃತಪಟ್ಟ ಹರೀಶ್ ಕುಮಾರ್ ತಂದೆ, ತಾಯಿ ರತ್ನಾವತಿ, ಸಹೋದರ ರಾದ ರಾಜೇಶ್, ರವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page