ಕಾಸರಗೋಡು: ಬಿಜೆಪಿಯ ಕಾಸರ ಗೋಡು ನಗರ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಮುನಿಸಿಪಾಲಿಟಿ ಟೌನ್ ಹಾಲ್ ಪರಿಸರದಲ್ಲಿ ನಿನ್ನೆ ಧರಣಿ ಮುಷ್ಕರ ಹೂಡಲಾಯಿತು. ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಉದ್ಘಾಟಿಸಿದರು.
ಕೇರಳದಲ್ಲಿ ಅತೀ ಹೆಚ್ಚು ವಿಜಿಲೆನ್ಸ್ ತನಿಖೆ ಎದುರಿಸುತ್ತಿರುವುದು ಕಾಸರಗೋಡು ನಗರಸಭೆಯಾಗಿದೆ. ಅಲ್ಲಿ ಭ್ರಷ್ಟಾಚಾರ ಮತ್ತು ಭಾರೀ ಅವ್ಯವಹಾರಗಳೂ ನಡೆಯುತ್ತಿವೆ. ವಿವಿಧ ಯೋಜನೆಗಳಿಗೆ ಸಂಬಂಧಿಸಿ ನಗರಸಭೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಆ ಬಗ್ಗೆ ಹಲವು ರೀತಿಯ ತನಿಖೆಗಳನ್ನು ನಗರಸಭೆ ಎದುರಿಸುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಎದುರಿಸುತ್ತಿರುವ ರೀತಿಯ ಶೋಚನೀಯಾವಸ್ಥೆ ಕೇರಳದ ಇತರ ಯಾವುದೇ ಸರಕಾರಿ ಆಸತ್ರೆಗಳಲ್ಲಿಲ್ಲ. ಪೌಷ್ಠಿಕಾಹಾರ ವಿತರಣೆ, ತ್ಯಾಜ್ಯ ಸಂಸ್ಕರಣೆ ಇತ್ಯಾದಿ ರಂಗಗಳು ಹದಗೆಟ್ಟಿದೆ. ಆಡಳಿತ ಪಕ್ಷವಾದ ಮುಸ್ಲಿಂ ಲೀಗ್‌ನ ಹಿತೈಷಿಗಳಿಗೆ ಭ್ರಷ್ಟಾಚಾರ ನಡೆಸಲು ಹಾಗೂ ಅನಧಿಕೃತ ಕಟ್ಟಡ ನಿರ್ಮಿಸಲು ನಗರಸಭೆ ಅನುಮತಿ ನೀಡುತ್ತಿದೆಯೆಂದೂ ಸಜೀವನ್ ಆರೋಪಿಸಿದ್ದಾರೆ. ನಗರಸಭಾ ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ನೇತಾರರಾದ ಗುರುಪ್ರಸಾದ್ ಪ್ರಭು, ಸವಿತಾ ಟೀಚರ್, ಶಂಕರ, ಅರುಣ್ ಕುಮಾರ್ ಶೆಟ್ಟಿ, ಸುಂದರ ಕೆ.ಆರ್, ಉಮಾ ಕಡಪ್ಪುರಂ, ಅನಿತಾ ನಾಯಕ್, ನಗರಸಭಾ ಸದಸ್ಯೆ ವೀಣಾ ಅರುಣ್ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದರು.