ಎಡರಂಗ ಸರಕಾರದ ಜನದ್ರೋಹ ನೀತಿ ಆರೋಪಿಸಿ ಬಿಎಂಎಸ್‌ನಿಂದ ರಾಜ್ಯ ವ್ಯಾಪಕ ಪಂಚಾಯತ್ ಮಟ್ಟದಲ್ಲಿ ಆಂದೋಲನ

ಕಾಸರಗೋಡು: ಎಡ ಪ್ರಜಾಪ್ರಭುತ್ವ ಒಕ್ಕೂಟ ಸರಕಾರದ ಪಿಣರಾಯಿ ವಿಜಯನ್ ನೇತೃತ್ವದಲ್ಲಿರುವ ಸರಕಾರ ೯ ವರ್ಷ ಕೇರಳವನ್ನು ಸಾಲದ ಕೂಪಕ್ಕೆ ತಳ್ಳಿರು ವುದಾಗಿ ಬಿಎಂಎಸ್ ಆರೋಪಿಸಿದೆ. ವಿಶ್ವದ ಅತ್ಯಂತ ಉನ್ನತ ಆರ್ಥಿಕ ಬೆಳವಣಿಗೆ ನಮ್ಮ ದೇಶದಲ್ಲಿರುವ ಸಂದರ್ಭದಲ್ಲೇ ಕೇರಳ ತೀವ್ರ ಆರ್ಥಿಕ ಸಂದಿಗ್ಧತೆಯಲ್ಲಿ, ಸಾಲದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದೆ. ಇಲ್ಲಿನ ಕೃಷಿಕರು, ಕಾರ್ಮಿಕರು, ಉದ್ಯಮಿಗಳು, ಸರಕಾರಿ ನೌಕರರು ಕೂಡ ಈ ವಿಷಯದಲ್ಲಿ ಪ್ರತಿಭಟನೆಯಲ್ಲಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಕಂಡುಬರುವುದರ ಐದು ಮಡಿಯಷ್ಟು ರಾಜ್ಯದಲ್ಲಿ ನಿತ್ಯೋಪಯೋಗ ಸಾಮಗ್ರಿಗಳಿಗೆ ಬೆಲೆ ಏರಿಕೆ ಕಂಡುಬರುತ್ತಿದೆ. ಕ್ಷೇಮ ನಿಧಿ, ಕ್ಷೇಮ ಪಿಂಚಣಿಗಳು ಸರಿಯಾಗಿ ವಿತರಿಸುವುದು, ಇತರ ಸೌಲಭ್ಯಗಳನ್ನು ಸೂಕ್ತ ಸಮಯದಲ್ಲಿ ನೀಡಲಾಗುತ್ತಿಲ್ಲ. ಅತ್ಯಂತ ಹೆಚ್ಚು ಜನರಿಗೆ ಉದ್ಯೋಗ ನೀಡುವ ನಿರ್ಮಾಣ ವಲಯ ಸಂಪೂರ್ಣ ಸ್ತಂಭನಾವಸ್ಥೆಯಲ್ಲಿದೆ. ಪರಂಪರಾಗತ ಉದ್ಯೋಗ ವಲಯ ಗಳು, ತಲೆಹೊರೆ ಕಾರ್ಮಿಕರು ಕೂಡ ದೊಡ್ಡ ಮಟ್ಟಿನ ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ ತೀವ್ರಗೊಂಡ ಸಮಯದಲ್ಲಿ ಪಿಎಸ್‌ಸಿ ಪರೀಕ್ಷೆಗಳು ಪಾಸಾಗಿ ರ‍್ಯಾಂಕ್ ಪಟ್ಟಿಯಲ್ಲಿ ಹೆಸರು ಸೇರಿರುವವರನ್ನು ಕೈಬಿಟ್ಟು, ಸುಮಾರು ಒಂದೂವರೆ ಲಕ್ಷದಷ್ಟು ಮಂದಿಗೆ ಹಿಂಬಾಗಿಲ ಮೂಲಕ ನೇಮಕಾತಿ ನೀಡಲಾಗಿದೆ ಯೆಂಬ ಆರೋಪವೂ ರಾಜ್ಯ ಸರಕಾರದ ಮೇಲಿದೆ. ರಾಜ್ಯದ ಸಾರ್ವಜನಿಕ ವಲಯ ಸಂಸ್ಥೆಗಳ, ಸರಕಾರಿ ನೌಕರರ ವೇತನ ಪರಿಷ್ಕರಣೆ, ಕ್ಷಾಮ ಭತ್ಯೆ, ಇತರ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಕೈಗಾರಿಕೆ ಸೌಹಾರ್ದ ರಾಜ್ಯವೆಂದು ಘೋಷಿಸಲಾಗುತ್ತಿದ್ದರೂ, ರಾಜ್ಯದಲ್ಲಿ ಯಾವುದೇ ಕೈಗಾರಿಕೆಗಳು ಆರಂಭಗೊಳ್ಳುತ್ತಿಲ್ಲ. ವಿದ್ಯಾವಂತರಾದ, ತಾಂತ್ರಿಕ ಶಿಕ್ಷಣ ಪೂರೈಸಿದ ಉದ್ಯೋಗಾರ್ಥಿಗಳಿಗೆ ಕೆಲಸ ನೀಡಲು ಸಾಧ್ಯವಾಗುವ ರೀತಿಯ ಸಂಸ್ಥೆಗಳು ರಾಜ್ಯದಲ್ಲಿ ಆರಂಭವಾಗುತ್ತಿಲ್ಲ. ಇದರಿಂದಾಗಿ ಎಲ್ಲರೂ ಅನ್ಯರಾಜ್ಯಗಳನ್ನು ಆಶ್ರಯಿಸುತ್ತಿದ್ದಾರೆ. ಜನೋಪಕಾರಪ್ರದ ವಾದ ಕೇಂದ್ರದ ಯೋಜನೆಗಳನ್ನು ರಾಷ್ಟ್ರೀಯ ವಿರೋಧದಿಂದ ಬುಡಮೇಲುಗೊಳಿಸಲಾಗುತ್ತಿದೆ. ಈ ಸನ್ನಿವೇಶದಲ್ಲಿ ಮುಂದಿನ ಹತ್ತು ವರ್ಷದೊಳಗೆ ಹಿರಿಯ ನಾಗರಿಕರು ಮಾತ್ರಯಿರುವ ಪ್ರದೇಶವಾಗಿ ಕೇರಳ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಗೃಹ ಇಲಾಖೆಯ ಹೊಣೆ ವಹಿಸಿರುವ ಮುಖ್ಯಮಂತ್ರಿಯೇ ಪೊಲೀಸ್ ಇಲಾಖೆಯಲ್ಲಿ ನಿಯಂತ್ರಣ ಕಳೆದು ಕೊಂಡಿದ್ದಾರೆಂದು, ಕಸ್ಟಡಿ ಸಾವುಗಳು, ದೌರ್ಜನ್ಯಗಳು ತುರ್ತು ಸಂದರ್ಭಗಳನ್ನು ಕೂಡ ನಾಚಿಸುವ ರೀತಿಯಲ್ಲಿ ನಡೆಯುತ್ತಿದೆ. ಎಲ್ಲಾ ವಲಯಗಳಲ್ಲೂ ಪೂರ್ಣವಾಗಿ ಪರಾಭವಗೊಂಡ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಬದಲಾಗಿದ್ದಾರೆಂದು ಬಿಎಂಎಸ್ ದೂರಿದೆ. ಈ ಹಿನ್ನೆಲೆಯಲ್ಲಿ ಎಡ ಸರಕಾರದ ಜನದ್ರೋಹ ನೀತಿ ವಿರುದ್ಧ ಕಾರ್ಮಿಕರ ಮುನ್ನಡೆ ಎಂಬ ಘೋಷಣೆಯನ್ನು ಮೊಳಗಿಸಿಕೊಂಡು ತೀವ್ರ ರೀತಿಯ ಆಂದೋಲನಗಳನ್ನು ನಡೆಸಲು ಬಿಎಂಎಸ್ ರಾಜ್ಯ ಸಮಿತಿ ತೀರ್ಮಾನಿಸಿದೆ. ಇದರ ಪ್ರಥಮ ಹಂತ ಎಂಬ ನೆಲೆಯಲ್ಲಿ ನಾಳೆಯಿಂದ ಅಕ್ಟೋಬರ್ ೧೪ರ ತನಕ ಪಂಚಾಯತ್ ಮಟ್ಟದಲ್ಲಿ ಪಾದಯಾತ್ರೆಗಳನ್ನು ನಡೆಸಲಾಗುವುದು. ರಾಜ್ಯದ ಎಲ್ಲಾ ಪಂಚಾಯತ್‌ಗಳಲ್ಲೂ, ನಗರಸಭೆಗಳಲ್ಲೂ, ಕಾರ್ಪರೇಶನ್ ವಾರ್ಡ್‌ಗಳಲ್ಲೂ ಬೆಳಿಗ್ಗೆಯಿಂದ ಸಂಜೆ ವರೆಗೆ ಪಾದಯಾತ್ರೆ ನಡೆಯಲಿದೆ.

ಬಿಎಂಎಸ್ ನೇತೃತ್ವದಲ್ಲಿ ನಾಳೆಯಿಂದ ಪಾದಯಾತ್ರೆ

ಕಾಸರಗೋಡು: ರಾಜ್ಯ ಸರಕಾರ ಜನದ್ರೋಹ ನೀತಿ ಅನುಸರಿಸುತ್ತಿದೆ ಎಂದು ಬಿಎಂಎಸ್ ಆರೋಪಿಸಿದ್ದು, ಅಂತಹ ನೀತಿಗಳನ್ನು ಪ್ರತಿಭಟಿಸಿ ನಾಳೆಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳು ಮತ್ತು ನಗರಸಭೆಗಳಲ್ಲಿ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್, ಕಾರ್ಯದರ್ಶಿ ಕೆ.ವಿ. ಬಾಬು, ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಮತ್ತು ಜಂಟಿ ಕಾರ್ಯದರ್ಶಿ ದಿನೇಶ್ ಬಂಬ್ರಾಣ ತಿಳಿಸಿದ್ದಾರೆ.

ನಾಳೆ ಆರಂಭಗೊಳ್ಳಲಿರುವ ಪಾದಯಾತ್ರೆ ಅಕ್ಟೋಬರ್ 14ರ ತನಕ ಮುಂದುವರಿಯಲಿದೆ. ಬೆಲೆಯೇರಿಕೆ ತಡೆಗಟ್ಟಬೇಕು, ಕಲ್ಯಾಣ ನಿಧಿ ಮತ್ತು ಕಲ್ಯಾಣ ಪಿಂಚಣಿಯನ್ನು 6000 ರೂ.ಗೇರಿಸಬೇಕು, ಎಲ್ಲಾ ಸವಲತ್ತುಗಳನ್ನು ಸಕಾಲದಲ್ಲಿ ಯಾವುದೇ ರೀತಿಯ ವಿಳಂಬ ಹೊಂದದೆ ವಿತರಿಸಬೇಕು, ಮರಳುಗಾರಿಕೆ ಪುನರಾರಂಭಿಸಬೇಕು, ತಲೆಹೊರೆ ಕಾರ್ಮಿಕರ ಕೆಲಸ ಮತ್ತು ವೇತನವನ್ನು  ಸಂರಕ್ಷಿಸಬೇಕು, ಸ್ಕೀಮ್ ವರ್ಕರ್ಸ್‌ಗಳನ್ನು ಸರಕಾರಿ ಸಿಬ್ಬಂದಿಗಳನ್ನಾಗಿ ಅಂಗೀಕರಿಸಬೇಕು, ಸಾರ್ವಜನಿಕ ಉದ್ದಿಮೆ ಮತ್ತು ಪರಂಪರಾಗತ ಉದ್ದಿಮೆಗಳನ್ನು ಸಂರಕ್ಷಿಸಬೇಕು, ಮೀನು ಕಾರ್ಮಿಕರ ಗೃಹ ನಿರ್ಮಾಣ ಯೋಜನೆಯನ್ನು ಪುನರಾರಂಭಿಸಬೇಕು, ಆಳಸಮುದ್ರದಲ್ಲಿ ಮೀನುಗಾರಿಕೆ ಮತ್ತು  ಮರಳುಗಾರಿಕೆ ವಿಷಯದಲ್ಲಿ  ತಲೆದೋರಿರುವ ಆತಂಕಗಳನ್ನು ಪರಿಹರಿಸಬೇಕು, ತೋಟಗಾರಿಕಾ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಬೇಕು, ಮುಚ್ಚಲಾಗಿರುವ ತೋಟಗಳನ್ನು ಸರಕಾರ ವಹಿಸಿ ಪುನರಾರಂಭಿಸಬೇಕು, ಭತ್ತದ ಬೆಂಬಲ ಬೆಲೆಯನ್ನು ಸರಕಾರ ನೇರವಾಗಿ ವಿತರಿಸಬೇಕು ಸೇರಿದಂತೆ ಇತರ ಹಲವು ಬೇಡಿಕೆಗಳನ್ನು ಮುಂದಿರಿಸಿಕೊಂಡು ಪಾದಯಾತ್ರೆ ನಡೆಸಲಾಗುವುದು.

ಸಮಗ್ರ ಉದ್ಯೋಗ ನೀತಿ ಜ್ಯಾರಿಗೊಳಿಸಬೇಕು, ಕೃಷಿ ವಲಯದಲ್ಲಿ ವೈಜ್ಞಾನಿಕ ರೀತಿಯ ಕೃಷಿ ನೀತಿ ಜ್ಯಾರಿಗೊಳಿಸಬೇಕು, ಉದ್ಯೋಗ ಖಾತರಿ ಕಾರ್ಮಿಕರಿಗೆ ಕೇಂದ್ರ ಸರಕಾರ ನೀಡುವ ಮೊತ್ತಕ್ಕೆ ಸರಿಸಮಾನವಾದ ಮೊತ್ತವನ್ನು ರಾಜ್ಯ ಸರಕಾರವೂ ನೀಡಬೇಕು, ಮಾದಕದ್ರವ್ಯ ಪಿಡುಗನ್ನು ತಡೆಯಬೇಕು, ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂರಕ್ಷಿಸಬೇಕು ಸೇರಿದಂತೆ ಇತರ ಹಲವು ಬೇಡಿಕೆಗಳನ್ನೂ  ಬಿಎಂಎಸ್ ಮುಂದಿರಿಸಿದೆ.

You cannot copy contents of this page