ಕಣ್ಣೂರು: ಬಿಜೆಪಿ ಕಚೇರಿಗಾಗಿ ಬಾಡಿಗೆಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ದುಷ್ಕರ್ಮಿಗಳು ಬಾಂಬೆಸೆದ ಘಟನೆ ಕಣ್ಣೂರು ಸಮೀಪದ ಪೆರಳಶ್ಶೇರಿಯಲ್ಲಿ ನಡೆದಿದೆ.
ಪೆರಳಶ್ಶೇರಿ ಪಳ್ಯ ಎಂಬಲ್ಲಿನ ಶ್ಯಾಮಲ ಎಂಬವರ ಮನೆಗೆ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಬಾಂಬ್ ಮನೆಯ ಎದುರುಗಡೆ ಸ್ಫೋಟಗೊಂಡಿದೆ. ಅದರ ರಭಸಕ್ಕೆ ಸಮೀಪದಲ್ಲಿರುವ ರಸ್ತೆಯ ತಡೆಗೋಡೆಗೂ ಹಾನಿ ಉಂಟಾಗಿದೆ. ದ್ವಿಚಕ್ರ ವಾಹನದಲ್ಲಿ ತಲುಪಿದ ದುಷ್ಕರ್ಮಿಗಳು ಬಾಂಬ್ ಎಸೆದಿರುವುದಾಗಿಯೂ, ಅವರು ಸಿಪಿಎಂ ಕಾರ್ಯಕರ್ತರಾಗಿ ದ್ದಾರೆಂದು ಇದೇ ಸಂದರ್ಭದಲ್ಲಿ ಬಿಜೆಪಿ ನೇತಾರರು ಆರೋಪಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಈ ಬಾಡಿಗೆ ಕಟ್ಟಡದಲ್ಲಿ ಬಿಜೆಪಿ ಕಚೇರಿ ನಾಳೆ ಉದ್ಘಾಟನೆಗೊಳ್ಳಲು ನಿರ್ಧರಿಸಲಾಗಿತ್ತು. ಉದ್ಘಾಟನೆಗೆ ದಿನ ಮಾತ್ರವೇ ಬಾಕಿ ಇರುವಂತೆ ಕಟ್ಟಡಕ್ಕೆ ಬಾಂಬ್ ಎಸೆಯಲಾಗಿದೆ. ಬಾಂಬ್ ಎಸೆತ ಸುದ್ದಿ ಹೊರಬಂದಂತೆಯೇ ಬಿಜೆಪಿಯ ಕಣ್ಣೂರು ದಕ್ಷಿಣ ಜಿಲ್ಲಾ ಸಮಿತಿ ಅಧ್ಯಕ್ಷ ಬಿಜು ಎಳಕ್ಕುಳ, ಮಂಡಲ ಅಧ್ಯಕ್ಷ ವಿಪಿನ್ ಐವ ರ್ಕುಳಂ, ಇತರ ಬಿಜೆಪಿ ನೇತಾರರಾದ ರಮೇಶನ್ ಪೂವತ್ತುಂತರ ಮತ್ತು ಎ. ಅನಿಲ್ ಕುಮಾರ್ ಎಂಬಿವರ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಅಲ್ಲಿಗೆ ಆಗಮಿಸಿದ್ದಾರೆ. ಬಾಂಬೆಸೆತ ಈ ಪ್ರದೇಶದಲ್ಲಿ ಭಾರೀ ರಾಜಕೀಯ ಸಂಘರ್ಷದ ವಾತಾವರಣ ಸೃಷ್ಟಿಸಿದೆ. ಅದನ್ನು ಮನಗಂಡು ಚಕ್ಕರಕ್ಕಲ್ ಪೊಲೀಸ್ ಠಾಣೆಯ ಎಸ್‌ಐ ಎಂ.ಪಿ. ಶಾಜಿಯವರ ನೇತೃತ್ವದಲ್ಲಿ ಈ ಪ್ರದೇಶದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.