ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಸಮೀಪದಲ್ಲಿರುವ ಕಟ್ಟಡವೊಂದರಿಂದ ತ್ಯಾಜ್ಯನೀರನ್ನು ಸಾರ್ವಜನಿಕ ರಸ್ತೆಯ ಚರಂಡಿಗೆ ಹರಿದುಬಿಡುತ್ತಿರುವುದು ವ್ಯಾಪಕ ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳುಗಳಿಂದ ಕಟ್ಟಡದ ತ್ಯಾಜ್ಯ ನೀರನ್ನು ಚರಂಡಿಗೆ ಹರಿದುಬಿಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ನೀಡಿದ ದೂರಿನಂತೆ ನಗರಸಭೆಯ ಆರೋಗ್ಯ ವಿಭಾಗ ಅಧಿಕಾರಿಗಳು ಹಲವು ಬಾರಿ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ತ್ಯಾಜ್ಯ ನೀರನ್ನು ಹರಿದುಬಿಡುವುದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟಡದ ಶೌಚಾಲಯದ ತ್ಯಾಜ್ಯ ವನ್ನು ಕೂಡಾ ಚರಂಡಿಗೆ ಹರಿದುಬಿಡುತ್ತಿದ್ದು ಇದರಿಂದ ಈ ಪ್ರದೇಶದಲ್ಲಿ ವ್ಯಾಪಕ ದುರ್ನಾತ ಬೀರುತ್ತಿದೆ. ಇದು ಜನರ ಆರೋಗ್ಯಕ್ಕೆ ತೊಂದರೆ ಸೃಷ್ಟಿಸಲಿದೆ ಯೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ಅಧ್ಯಕ್ಷರು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.





