ಪೆರ್ಲ: ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಿಂತಿರುಗುತ್ತಿದ್ದ ವೇಳೆ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಪೆರ್ಲದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮಣಿಯಂಪಾರೆ ನಿವಾಸಿ ಆಟೋ ರಿಕ್ಷಾ ಚಾಲಕ ನಾರಾಯಣ ಮೂಲ್ಯ (67) ಮೃತಪಟ್ಟವರು. ಇವರು ನಿನ್ನೆ ರಾತ್ರಿ 8.30ರ ವೇಳೆ ಮನೆಯತ್ತ ತೆರಳುತ್ತಿದ್ದ ವೇಳೆ ಶೇಣಿ ಶಾಲೆ ಬಳಿ ಇವರ ರಿಕ್ಷಾಗೆ ಕಾರು ಢಿಕ್ಕಿ ಹೊಡೆದಿದೆ. ರಿಕ್ಷಾ ಮಗುಚಿ ಬಿದ್ದು ಗಂಭೀರ ಗಾಯಗೊಂಡ ಚಾಲಕನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸುವ ಮಧ್ಯೆ ಸಾವು ಸಂಭವಿಸಿದೆ.
ರಿಕ್ಷಾದಲ್ಲಿದ್ದ ಇತರ ಪ್ರಯಾಣಿಕರು ಕೂಡಾ ಗಾಯಗೊಂಡಿದ್ದು ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶೇಣಿ ಶ್ರೀ ಅಯ್ಯಪ್ಪ ಮಂದಿರದ ಸ್ಥಾಪಕರಲ್ಲಿ ಪ್ರಮುಖರಾಗಿದ್ದ ಇವರು ಹಿರಿಯ ಗುರುಸ್ವಾಮಿಯಾಗಿದ್ದರು. ಮೃತರು ಪತ್ನಿ ಗಿರಿಜ, ಮಕ್ಕಳಾದ ಯೋಗೀಶ, ಸುರೇಂದ್ರ, ಹರೀಶ, ಸೊಸೆಯಂದಿರಾದ ಶಾರದಾ, ಪುಷ್ಪ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನ ಶೇಣಿ ಮಣಿಯಂಪಾರೆ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ.