ಕಾಸರಗೋಡು: ನ್ಯಾಯಾಲಯದ ನೌಕರ ಚಲಾಯಿಸಿದ ಕಾರು ಬೇರೊಂದು ಕಾರು ಹಾಗೂ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಆರರ ಹರೆಯದ ಬಾಲಕ ಹಾಗೂ ಕಾರು ಪ್ರಯಾಣಿಕ ಗಾಯಗೊಂಡ ಘಟನೆ ನಡೆದಿದೆ. ಮೊನ್ನೆ ರಾತ್ರಿ ವಿದ್ಯಾನಗರ ಜಂಕ್ಷನ್‌ನಲ್ಲಿ ಅಪಘಾತವುಂಟಾಗಿದೆ. ಕಾರಿನ ಹಿಂಬದಿ ಸೀಟಿನಲ್ಲಿದ್ದ ಚೆಂಗಳ ಬಂಬ್ರಾಣಿ ನಿವಾಸಿ ಮುಹಮ್ಮದ್ ಅಶ್ರಫ್‌ರ ಪುತ್ರ ಜಲಾಲ್‌ಸೂಫಿ ಹಾಗೂ ಸ್ಕೂಟರ್ ಪ್ರಯಾಣಿಕ ಗಾಯಗೊಂಡಿದ್ದಾರೆ. ಬಾಲಕನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನ್ಯಾಯಾಲಯದ ನೌಕರನೂ ಕೋಟ್ಟಯಂ ನಿವಾಸಿಯಾದ ಅನೀಶ್ ಅಪಘಾತ ಸೃಷ್ಟಿಸಿದ ಕಾರನ್ನು ಚಲಾಯಿಸುತ್ತಿದ್ದರೆನ್ನಲಾಗಿದೆ. ಕಾರು ಮೊದಲು ಒಂದು ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದಿತ್ತು.
ಅನಂತರ ಒಂದು ಸ್ಕೂಟರ್ ಹಾಗೂ ಬೇರೊಂದು ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಕಾರು ಪ್ರಯಾಣಿಕನಾದ ಮುಹಮ್ಮದ್ ಅಶ್ರಫ್‌ರ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಪಘಾತ ಸೃಷ್ಟಿಸಿದ ಕಾರಿನ ಚಾಲಕನನ್ನು ವಿದ್ಯಾನಗರ ಪೊಲೀಸರು ಕಸ್ಟಡಿಗೆ ತೆಗೆದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ.







