ಕಾಸರಗೋಡು: ಆನ್‌ಲೈನ್ ವಂಚನೆಗಾಗಿ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ವಂಚನೆ ನಡೆಸಿದ ಇಬ್ಬರ ವಿರುದ್ಧ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಆದರೆ ಈ ಪ್ರಕರಣದ ಆರೋಪಿಗಳು ಈಗ ವಿದೇಶದಲ್ಲಿರುವುದರಿಂದಾಗಿ ಅವರನ್ನು ಸದ್ಯ ಸೆರೆಹಿಡಿಯಲು ಸಾಧ್ಯವಾಗಿಲ್ಲವೆಂದು ಸೈಬರ್ ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಹಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚನಾ ಜಾಲ ಬಾಡಿಗೆಗೆ ತೆಗೆದುಕೊಂಡು ಅದನ್ನು ತಮ್ಮ ವಂಚನೆಗಾಗಿ ಬಳಸಿದ ಬಗ್ಗೆಯೂ ಸೈಬರ್ ಪೊಲೀಸರಿಗೆ ತಿಳಿಸಿದ್ದಾರೆ.
ಹೀಗೆ ಬಾಡಿಗೆಗೆ ತಮ್ಮ ಬ್ಯಾಂಕ್ ಖಾತೆಗಳನ್ನು ನೀಡುವ ವಿದ್ಯಾರ್ಥಿಗಳಿಗೆ ಸೈಬರ್ ವಂಚಕರು ಬಾಡಿಗೆ ರೂಪದಲ್ಲಿ ಹಣವನ್ನು ನೀಡಿದ್ದಾರೆ. ಮಾತ್ರವಲ್ಲ ಲಾಭದ ಒಂದು ಅಂಶವನ್ನೂ ಅಂತಹ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಕಳೆದ ವರ್ಷ ಕಾಸರಗೋಡು ಪೇಟೆಯ ವಿದ್ಯಾರ್ಥಿಯೋರ್ವನ ಬ್ಯಾಂಕ್ ಖಾತೆಯನ್ನು ತಿಂಗಳಿಗೆ ತಲಾ 5000 ರೂ.ಗೆ ಬಾಡಿಗೆಗೆ ಇಂತಹ ವಂಚನಾ ಜಾಲದವರು ಪಡೆದಿರುವುದನ್ನು ಸೈಬರ್ ಪೊಲೀಸರು ಪತ್ತೆಹಚ್ಚಿದ್ದಾರೆ. ಆ ಬಗ್ಗೆ ಕೇಸು ಕೂಡಾ ದಾಖಲುಗೊಂಡಿದೆ.