ಕಾಸರಗೋಡು: 67 ವರ್ಷದ ಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣದ ಆರೋಪಿಗಳಾಗಿರುವ ಪತ್ನಿ ಮತ್ತು ಸಂಬಂಧಿಕನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್‌ಚಂದ್ರಭಾನು ಅವರು ಜೀವಾವಧಿ ಸಜೆ ಹಾಗೂ ತಲಾ ಎರಡು ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಪಿಲಿಕೋಡು ಮಡಿವಯಲ್‌ನ ಪತ್ತಾನತ್‌ನ ಜಾನಕಿ ಅಲಿಯಾಸ್ ವೆಂಬಿರಿಚ್ಚಿ ಜಾನಕಿ (55) ಮತ್ತು ಆಕೆಯ ಸಂಬಂಧಿಕ ರಾಜೇಶ್ ಅಲಿಯಾಸ್ ಉಂಡ ರಾಜೇಶ್(4೦) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ ಪ್ರಕರಣದ ಮೂರನೇ ಆರೋಪಿ ಅನಿಲ್ ಅಲಿಯಾಸ್ ಅನಿ ಮಾಮನ್ ಎಂಬಾತ ಈ ಪ್ರಕರಣದ ವಿಚಾರಣೆ ಮಧ್ಯೆ ಆತ್ಮಹತ್ಯೆಗೈದಿದ್ದನು.
ಪಿಲಿಕ್ಕೋಡ್ ಮಡಿವಯಲ್‌ನ ಪತ್ತಾನತ್ ಕುಂಞಂಬು (67) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದ ಎರಡನೇ ಆರೋಪಿಯಾಗಿರುವ ರಾಜೇಶ್‌ನಿಗೆ ಜೀವಾವಧಿ ಸಜೆಯ ಹೊರತಾಗಿ ನ್ಯಾಯಾಲಯ ಹತ್ತು ವರ್ಷ ಅಧಿಕ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿದೆ.
2022 ಜುಲೈ 21ರಂದು ರಾತ್ರಿ ಕುಂಞಂಬುರನ್ನು ಅವರ ಮನೆಯಲ್ಲಿ ಕೊಲೆಗೈಯ್ಯಲಾಗಿತ್ತು. ಕೋವಿಡ್ ಮಹಾಮಾರಿ ತಗಲಿ ದೇಹದ ಒಂದು ಭಾಗ ಚಲನರಹಿತಗೊಂಡ ಅವರು ಮನೆಯಲ್ಲಿ ಶಯ್ಯಾವಸ್ಥೆಯಲ್ಲಿದ್ದರು. ಅದರಿಂದ ಅವರ ಪರಿಚಾರಿಕೆ ಪತ್ನಿ ಜಾನಕಿಗೆ ಒಂದು ಭಾರವಾಗಿ ಪರಿಣಮಿಸಿತ್ತು. ಮಾತ್ರವಲ್ಲ ಪರಿಚಾರಿಕೆಯ ಹೆಸರಲ್ಲಿ ಅವರಿಬ್ಬರ ಮಧ್ಯೆ ಪದೇ ಪದೇ ವಾಗ್ವಾದವೂ ನಡೆಯುತ್ತಿತ್ತೆಂದು, ಅದುವೇ ಕುಂಞಂಬುರ ಕೊಲೆಗೆ ಕಾರಣವಾಗಿದೆ ಎಂಬುದು ಪ್ರೋಸಿಕ್ಯೂಷನ್‌ನ ವಾದವಾಗಿದೆ. ಜಾನಕಿಯ ನಿರ್ದೇಶದ ಪ್ರಕಾರ ಎರಡನೇ ಆರೋಪಿ ರಾಜೇಶ್ ಮತ್ತು ಮೂರನೇ ಆರೋಪಿ ಅನಿಲ್ ಸೇರಿ ನಡೆಸಿದ ಕುಂಞಂಬುರ ಕೊಲೆಗೆ ಸಂಬಂಧಿಸಿ ಕುಂಞಂಬುರ ಸಂಬಂಧಿಕ ಪ್ರಮೋದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಚಂದೇರ ಪೊಲೀಸರು ಈ ಬಗ್ಗೆ ಮೊದಲು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ಬಳಿಕ ನಡೆದ ತನಿಖೆಯಲ್ಲಿ ಕುಂಞಂಬುರ ಸಾವು ಕೊಲೆಯಾಗಿದೆ ಎಂದು ಸಾಬೀತುಗೊಂಡಿತ್ತು. ನಂತರ ಪೊಲೀಸರು ಅದನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂ ಡಿದ್ದರು. ಅಂದು ಚಂದೇರ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದು, ಈಗ ಕಾಸರಗೋಡು ವಿಜಿಲೆನ್ಸ್ ಇನ್ಸ್‌ಪೆಕ್ಟರ್ ಆಗಿರುವ ಎಂ.ವಿ. ಶ್ರೀದಾಸ್ ಈ ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಸಿದ್ದರು. ಅಂದು ಚಂದೇರ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದು, ಈಗ ಕಣ್ಣೂರು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿಯಾಗಿ ರುವ ಪಿ. ನಾರಾಯಣನ್ ಈ ಪ್ರಕರಣದ ಮುಂದಿನ ಹಂತದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿ ಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪಬ್ಲಿಕ್ ಪ್ಲೀಡರ್ ಜಿ. ಚಂದ್ರಮೋ ಹನನ್ ನ್ಯಾಯಾಲಯದಲ್ಲಿ ವಾದಿಸಿದ್ದರು.






