ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ 9 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯ ಬೆಂಡೋಲೆಯನ್ನು ಕದ್ದ ಪ್ರಕರಣದ ಆರೋಪಿ ಮೂಲತಃ ಕರ್ನಾಟಕ ಕೊಡಗು ನಾಪೊಕ್ಲು ಪರಂಬೋಳಿ ಕುಂಜಿಲ ನಿವಾಸಿ ಹಾಗೂ ಈಗ ಹೊಸದುರ್ಗ ಪೂಂಜಾವಿ ಬದ್ರಿಯಾ ಮಂಜಿಲ್‌ನಲ್ಲಿ ವಾಸಿಸುವ ಪಿ.ಎ. ಸಲೀಂ ಅಲಿಯಾಸ್ ಸಲ್ಮಾನ್(37)ಎಂಬಾತನಿಗೆ ಹೊಸದುರ್ಗ ವಿಶೇಷ ಕ್ಷಿಪ್ರ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ವಿವಿಧ ಸೆಕ್ಷನ್‌ಗಳ ಪ್ರಕಾರ ಅವಳಿ ಜೀವಾವಧಿ ಶಿಕ್ಷೆ , 2,71,000 ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ನಾಲ್ಕುವರ್ಷ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಆರೋಪಿಯ ವಿರುದ್ಧ ದಾಖಲಿಸಲಾದ ಎಲ್ಲಾ 9 ಸೆಕ್ಷನ್‌ನಗಳ ಪ್ರಕಾರವೂ ಆತನಿಗೆ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಸಜೆಯ ಹೊರತಾಗಿ ಆರೋಪಿಗೆ 35 ವರ್ಷ ಕಠಿಣ ಸಜೆಯನ್ನು ವಿಧಿಸಲಾಗಿದೆ. ಪೋಕ್ಸೋ ಕಾನೂನುಪ್ರಕಾರ ಈತನಿಗೆ ಆಜೀವಾಂತ ಜೈಲಿನಲ್ಲೇ ಕಳೆಯಬೇಕಾಗಿದೆ.
ಬಾಲಕಿಯ ದೇಹದಿಂದ ಕದ್ದ ಚಿನ್ನವನ್ನು ಮಾರಾಟ ಮಾಡಲು ಸಲೀಂಗೆ ಸಹಾಯವೊದಗಿಸಿದ್ದ ಆತನ ಸಹೋದರಿ ಕೂತಪರಂಬ ನಿವಾಸಿ ಹಾಗೂ ಈ ಪ್ರಕರಣದ ಎರಡನೇ ಆರೋಪಿಯಾ ಗಿರುವ ಸುಬೈದ (21)ಳಿಗೆ ನ್ಯಾಯಾಲಯ ನಿನ್ನೆಯ ಕಲಾಪ ಮುಗಿಯುವ ತನಕ ಶಿಕ್ಷೆ ಹಾಗೂ 1000 ರೂ. ಜುಲ್ಮಾನೆ ವಿಧಿಸಿ ತೀರ್ಪುನೀಡಿದೆ.
2024 ಮೇ 15ರಂದು ಮುಂಜಾನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಗೊಳಪಟ್ಟ ಪ್ರದೇಶದ ೯ರ ಹರೆಯದ ಬಾಲಕಿ ಮನೆಯೊಳಗೆ ನಿದ್ರಿಸುತ್ತಿದ್ದ ವೇಳೆ ಆಕೆಯನ್ನು ಅಲ್ಲಿಂದ ಅಪಹರಿಸಿ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಹೊಲಕ್ಕೆ ಕರೆದೊಯ್ದು ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯ ಬೆಂಡೋಲೆಯನ್ನು ಕದ್ದ ಬಳಿಕ ಆಕೆಯನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾದ ಆರೋಪದಂತೆ ಹೊಸದುರ್ಗ ಪೊಲೀಸರು ಆರೋಪಿ ಸಲೀಂನ ವಿರುದ್ಧ ಭಾರತೀಯ ಶಿಕ್ಷಾ ಕಾನೂನಿನ ಸೆಕ್ಷನ್ 449, 369,370(4), 506(2),342, 394.376 (ಎಬಿ)ಗಳ ಪ್ರಕಾರ ಹಾಗೂ ಪೋಕ್ಸೋ ಕಾನೂನು ಆಕ್ಟ್ 6 (ಬಿ) ಮತ್ತು 5(ಎಂ)ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಕದ್ದ ಚಿನ್ನವನ್ನು ಮಾರಾಟ ಮಾಡಲು ಆರೋಪಿಗೆ ಸಹಾಯವೊದಗಿಸಿದ ಆತನ ಸಹೋದರಿ ಸುಬೈದಾಳ ವಿರುದ್ಧ ಸೆಕ್ಷನ್ 414ರ ಪ್ರಕಾರವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 67 ಸಾಕ್ಷಿದಾರರು ಹಾಗೂ 40 ವಸ್ತು ಪುರಾವೆಗಳನ್ನು ಒಳಗೊಂಡ ಚಾರ್ಜ್ ಶೀಟ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಘಟನೆ ನಡೆದ ಬಳಿಕ ಪರಾರಿ
ಯಾಗಿದ್ದ ಆರೋಪಿ ಸಲೀಂನನ್ನು ಆಂಧ್ರಪ್ರದೇಶದಿಂದ ಅಂದು ಹೊಸದುರ್ಗ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದು ಈಗ ಪರಾವೂರು ಡಿವೈಎಸ್ಪಿಯಾಗಿರುವ ಎನ್.ಪಿ. ಆಜಾದ್ ನೇತೃತ್ವದ ಪೊಲೀಸರು ಬಂಧಿಸಿದ್ದರು. ಆರೋಪಿ ಬಂಧಿತನಾದ 39ನೇ ದಿನದಂದು ಪೊಲೀಸರು ಈ ಪ್ರಕರಣದ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.