ಕಾಸರಗೋಡು: ಕಲ್ಲೆಸೆದು ಕೆಎಸ್‌ಆರ್‌ಟಿಸಿ ಬಸ್ಸಿನ ಗಾಜು ಪುಡಿಗೈದು ಅದರ ಚಾಲಕ ಗಾಯಗೊಂಡ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಧೀಶೆ ಕೆ. ಪ್ರಿಯಾ ನಾಲ್ಕು ವರ್ಷ ಸಜೆ ಹಾಗೂ 40,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಆಲಂಪಾಡಿ ಸುಬ್ಬತ್ತೊಟ್ಟಿ ಹೌಸ್‌ನ ಇಬ್ರಾಹಿಂ ಬಾದ್‌ಶಾ (27) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿ ದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿ ದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2019 ಡಿಸೆಂಬರ್ 17ರಂದು ಸಂಜೆ ಚೆರ್ಕಳ ನಾಲ್ಕನೇ ಮೈಲಿನಲ್ಲಿ ಕಾಸರಗೋಡಿನಿಂದ ಕಣ್ಣೂರಿಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆದು ಅದರ ಗಾಜು ಪುಡಿಗೈದು ಚಾಲಕ ಗಾಯಗೊಂಡ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಯು.ಪಿ ವಿಪಿನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ.ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.