ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮೂರು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಣ್ಣೂರು ಧರ್ಮಡಂ ಮೀತ್ತಲ್ ಪೀಡಿಗ ನಿವಾಸಿ ಎನ್.ಕೆ. ಸಲ್ಮಾನ್ (26) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2020 ಜೂನ್ 2ರಂದು ಮುಂಜಾನೆ ಕುಂಬಳೆ- ಸೀತಾಂಗೋಳಿರಸ್ತೆಯ ಭಾರತ್ ಪೆಟ್ರೋಲ್ ಬಂಕ್‌ಗೆ ಸಮೀಪ ಅಂದು ಕುಂಬಳೆ ಪೊಲೀಸ್ ಠಾಣೆಯ ಎಸ್.ಐ. ಆಗಿದ್ದ ಕೆ. ವಿನೋದ್ ಕುಮಾರ್‌ರ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಆರು ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಲ್ಮಾನ್‌ಗೆ ಈ ಶಿಕ್ಷೆ ವಿಧಿಸಲಾಗಿದೆ. ಈತ ಈ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ. ಈ ಪ್ರಕರಣದ ಒಂದನೇ ಆರೋಪಿ ಕಣ್ಣೂರು ಮುಳಪ್ಪಿಲಂಗಾಡ್ ಕಸ್ಟಮ್ಸ್ ಕಚೇರಿ ಬಳಿ ನಿವಾಸಿ ಕೆ.ವಿ. ಅರ್ಶಾದ್ (28) ಎಂಬಾತನಿಗೆ  ನ್ಯಾಯಾಲಯ ಈ ಹಿಂದೆ ಮೂರು ವರ್ಷ ಸಜೆ ಮತ್ತು 30,000 ರೂ. ಜುಲ್ಮಾನೆ ವಿಧಿಸಿತ್ತು. ಮೂರನೇ ಆರೋಪಿ ಸೀತಾಂ ಗೋಳಿ ಮುಗು ರಸ್ತೆ ಬಳಿಯ ಮುಹಮ್ಮದ್ ಶರೀಫ್ (25) ತಲೆಮರೆಸಿಕೊಂಡಿದ್ದಾನೆ. ಆದ್ದರಿಂದ ಆತನ ಮೇಲಿನ ಕೇಸಿನ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಅಂದು ಕುಂಬಳೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಪಿ. ಪ್ರಮೋದ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರ ಮೋಹನ್ ಮತ್ತು ನ್ಯಾಯವಾದಿ ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.

RELATED NEWS

You cannot copy contents of this page