ಪತ್ತನಂತಿಟ್ಟ: ಶಬರಿಮಲೆ ದೇಗುಲ ಮತ್ತು ಪರಿಸರ ಪ್ರದೇಶಗಳ ಭದ್ರತೆಯನ್ನು ಕೇಂದ್ರ ಪಡೆಗೆ ವಹಿಸಿಕೊಡಲಾಗಿದೆ. ಆರ್‌ಪಿಎಫ್‌ನ 140 ಮಂದಿ ಒಳಗೊಂಡ ತಂಡ ಇಂದು ಬೆಳಿಗ್ಗೆ ಶಬರಿಮಲೆಗೆ ತಲುಪಿ ಭದ್ರತೆಯ ಹೊಣೆಗಾರಿಕೆ ವಹಿಸಿಕೊಂಡಿದೆ. ಇದು ಕೊಯಂಬತ್ತೂರಿನ ೧೦೫ನೇ ಬೆಟಾಲಿಯನ್ ತಂಡವಾಗಿದೆ. ಸನ್ನಿಧಾನ, ಭಸ್ಮಕೆರೆ, ಕ್ಷೇತ್ರದ ಗರ್ಭಗುಡಿಯ ಪರಿಸರ, ಅಪ್ಪ-ಅರವಣ ಪಾಯಸ ಪ್ರಸಾದ ವಿತರಣಾ ಕೌಂಟರ್‌ಗಳ ಭದ್ರತಾ ಹೊಣೆಗಾರಿಕೆ ಆರ್‌ಪಿಎಫ್‌ಗಾಗಿ ರುವುದು. ಸಿಆರ್‌ಪಿಎಫ್‌ನ ಡೆಪ್ಯುಟಿ ಕಮಾಂಡರ್ ಬಿಜುರಿಗೆ ಭದ್ರತೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಇದರ ಹೊರತಾಗಿ ಕೇರಳ ಪೊಲೀಸರ ಭದ್ರತಾ ಕ್ರಮಗಳು ಈ ಹಿಂದಿನ ರೀತಿಯಲ್ಲೇ ಮುಂದುವರಿಯುತ್ತಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಪಡೆಯನ್ನು ಕಳುಹಿಸಿಕೊಡುವುದಾಗಿ ಕೇಂದ್ರ ಸರಕಾರ ತಿಳಿಸಿದೆ.
ಇದೇ ವೇಳೆ ರಾಜ್ಯ ಮುಜರಾಯಿ ಖಾತೆ ಸಚಿವ ವಿ.ಎನ್. ವಾಸವನ್ ಶಬರಿಮಲೆಗೆ ತಲುಪಿ ಅಲ್ಲಿನ ವ್ಯವಸ್ಥೆಗಳ ಕುರಿತು ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸಿದ್ದಾರೆ. ಸಚಿವರ ಅಧ್ಯಕ್ಷತೆಯಲ್ಲಿ ಇಂದು ಅವಲೋಕನ ಸಭೆ ನಡೆಯುತ್ತಿದೆ. ಶಬರಿಮಲೆಯಲ್ಲಿ ಭಕ್ತರ ಭಾರೀ ಸಂದಣಿಯಿಂದ ತಲೆದೋರಿರುವ ನೂಕುನುಗ್ಗಲಿನ ವಾತಾವರಣ ಈಗ ಸಡಿಲಗೊಂಡಿದೆ.
ಕಠಿಣ ನಿಯಂತ್ರಣ ಗಳನ್ನು ಏರ್ಪಡಿಸಿರುವುದರಿಂದ ಇದು ಸಾಧ್ಯವಾಗಿದೆ. ಭಕ್ತರಿಗೆ ಸುಗಮವಾಗಿ ದೇವರ ದರ್ಶನ ಪಡೆಯಲಾಗುತ್ತಿದೆ. ಸ್ಪೋಟ್ ಬುಕ್ಕಿಂಗ್ ಮೂಲಕ ಪ್ರತಿದಿನ 5೦೦೦ ತೀರ್ಥಾಟಕರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಬಾರಿಯ ಮಂಡಲ ಕಾಲದ ತೀರ್ಥಾಟನೆ ನವಂಬರ್ 16ರಿಂದ ಆರಂಭ ಗೊಂಡ ಬಳಿಕ ನಿನ್ನೆ ವರೆಗೆ 4,94,151 ಮಂದಿ ತೀರ್ಥಾಟಕರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ. ನಿನ್ನೆ ಮಾತ್ರ 72,037 ಮಂದಿ ದರ್ಶನ ಪಡೆದಿದ್ದಾರೆ.







